ಬೆಂಗಳೂರು(ಮೇ 08): ಮೂರನೇ ಹಂತದ ಲಾಕ್ಡೌನ್ನಲ್ಲಿ ರಾಜ್ಯಾದ್ಯಂತ ಕೆಂಪೇತರ ವಲಯಗಳಲ್ಲಿನ ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಲಾಗಿದೆ. ಈಗ ಬಾರ್, ಲಾಡ್ಜ್, ಕ್ಲಬ್ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಇವತ್ತು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್. ನಾಗೇಶ್ ಈ ವಿಚಾರವನ್ನು ತಿಳಿಸಿದ್ಧಾರೆ. ನಾಳೆಯಿಂದ ಲಾಡ್ಜ್, ಬಾರ್ ಮತ್ತು ಕ್ಲಬ್ಗಳಿಗೆ ಮದ್ಯ ಮಾರಾಟಕ್ಕೆ ಮಾಡಲು ಅನುಮತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಇಲ್ಲಿ ಮದ್ಯ ಮಾರಾಟ ಮಾಡಬಹುದು. ಆದರೆ, ಎಂಆರ್ಪಿ ಬೆಲೆಗೆ ಮಾತ್ರ ಮಾರಲು ಅನುಮತಿ ಇದೆ. ಹೆಚ್ಚಿನ ಬೆಲೆಗೆ ಮಾರಿದರೆ ಖಾಯಂ ಆಗಿ ಪರವಾನಿಗೆ ರದ್ದು ಮಾಡಲಾಗುವುದು ಎಂದು ಅಬಕಾರಿ ಸಚಿವರು ಎಚ್ಚರಿಕೆ ನೀಡಿದರು.
ಇದೇ ವೇಳೆ, ಆನ್ಲೈನ್ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದನ್ನು ಸಚಿವರು ಸ್ವಾಗತಿಸಿದರು. ತಾನು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಓದಿಲ್ಲ. ನನ್ನ ಅಭಿಪ್ರಾಯದಲ್ಲಿ ಆನ್ಲೈನ್ ಮಾರಾಟಕ್ಕೆ ಅವಕಾಶ ನೀಡಿದರೆ ತಪ್ಪಿಲ್ಲ. ಈ ಬಗ್ಗೆ ಮೊದಲಿಂದಲೂ ಚರ್ಚೆ ನಡೆದಿತ್ತು ಎಂದು ಹೆಚ್. ನಾಗೇಶ್ ಹೇಳಿದರು.
ಅಬಕಾರಿ ಸಚಿವರು ಈ ಹಿಂದೆ ಮದ್ಯವನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆದರೆ, ವಿಪಕ್ಷಗಳು ಇವರ ಸಲಹೆಯನ್ನು ಕಟುವಾಗಿ ಟೀಕಿಸಿದ್ದವು. ಈಗ ಸರ್ವೋಚ್ಚ ನ್ಯಾಯಾಲಯವೇ ಮದ್ಯದ ಡೋರ್ ಡೆಲಿವರಿಗೆ ಅವಕಾಸ ಮಾಡಿಕೊಟ್ಟಿದೆ.
ಇನ್ನು, ಮದ್ಯ ಮಾರಾಟದಿಂದ ಸರ್ಕಾರಕ್ಕೆ ಹೆಚ್ಚು ಆದಾಯ ಹರಿದು ಬರುವ ನಿರೀಕ್ಷೆ ಇದೆ. ಅಬಕಾರಿ ಸಚಿವರ ಪ್ರಕಾರ ಈ ವರ್ಷ 2,500 ಕೋಟಿ ಹೆಚ್ಚುವರಿ ಆದಾಯ ಬರುವ ಸಾಧ್ಯತೆ ಇದೆ. ಅಬಕಾರಿ ವಿಭಾಗದಿಂದ ರಾಜ್ಯಕ್ಕೆ 25,000 ಕೋಟಿ ರೂಪಾಯಿ ಆದಾಯ ಬರಬಹುದು ಎಂದು ಅವರು ಅಭಿಪ್ರಾಯಪಟ್ಟರು