ಶಿವಮೊಗ್ಗ: ಮಕರ ಸಂಕ್ರಾಂತಿ ಪ್ರಯುಕ್ತ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಹೋರಿ ಹಬ್ಬದಲ್ಲಿ ದುರಂತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಶಿವಮೊಗ್ಗ ತಾಲೂಕಿನ ಕೊನಗವಳ್ಳಿ ಮತ್ತು ಶಿಕಾರಿಪುರ ತಾಲೂಕಿನ ಆವನಟ್ಟಿ ಸಮೀಪದ ಮಾಳ್ಳೂರು ಗ್ರಾಮದಲ್ಲಿ ಸಂಭವಿಸಿದ ಪ್ರತ್ಯೇಕ ಅವಘಡದಲ್ಲಿ ಶಿವಮೊಗ್ಗ ಆಲ್ಕೊಳದ ನಿವಾಸಿ ಲೋಕೇಶ್ (32) ಮತ್ತು ಮಾಳ್ಳೂರು ಗ್ರಾಮದ ರಂಗನಾಥ (24) ಎಂಬುವರು ಮೃತಪಟ್ಟಿದ್ದಾರೆ.
ಹೋರಿಗಳ ಕಾಲಡಿ ಸಿಲುಕಿ ಆರು ಮಂದಿ ಗಾಯಗೊಂಡಿದ್ದಾರೆ.
ಜ.14ರಂದು ಮಳ್ಳೂರಿನಲ್ಲಿ ನಡೆದಿದ್ದ ಹೋರಿ ಹಬ್ಬದಲ್ಲಿ ರಂಗನಾಥ್ ಗಂಭೀರವಾಗಿ ಗಾಯಗೊಂಡಿದ್ದ. ಶಿಕಾರಿಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಟ್ಟೆಗೆ ಹೊಲಿಗೆ ಹಾಕಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ಬೆಳಗಿನ ಜಾವ ರಂಗನಾಥ್ ಮೃತಪಟ್ಟಿದ್ದಾರೆ. ಆನವಟ್ಟಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಭಾನುವಾರ ಬೆಳಗ್ಗೆ ಸಂಕ್ರಾಂತಿ ನಿಮಿತ್ತ ಕೊನಗನವಳ್ಳಿಯಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಲೋಕೇಶ್ ಅವರ ಎದೆಗೆ ಹೋರಿ ತಿವಿದಿತ್ತು. ಮೆಗ್ಗಾನ್ ಆಸ್ಪತ್ರೆಗೆ ಕರೆತಂದರೂ ಲೋಕೇಶ್ ಬದುಕುಳಿದಿಲ್ಲ. ಕೊನಗವಳ್ಳಿಯ ಹೋರಿ ಹಬ್ಬದ ಆಯೋಜಕರ ಮೇಲೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.