ಖಾನಾಪುರ: ಪಟ್ಟಣದಿಂದ ಕೇವಲ ನಾಲ್ಕು ಕಿ.ಮೀ ಅಂತರದಲ್ಲಿರುವ ರಾಮಗುರವಾಡಿ ಗ್ರಾಮ ಹಲವು ಮೂಲಸೌಕರ್ಯಗಳ ಕೊರತೆಯಿಂದ ಬಡವಾಗಿದೆ.
ಜಾಂಬೋಟಿ- ಜತ್ತ ರಾಜ್ಯ ಹೆದ್ದಾರಿಯಿಂದ ಉತ್ತರ ದಿಕ್ಕಿಗೆ 1 ಕಿ.ಮೀ ಅಂತರದಲ್ಲಿರುವ ಈ ಗ್ರಾಮಕ್ಕೆ ಸರಿಯಾದ ಸಂಪರ್ಕ ರಸ್ತೆಯೇ ಇಲ್ಲ.
ಇದು ಇಲ್ಲಿನ ಬಹುಮುಖ್ಯ ಸಮಸ್ಯೆ. ರಸ್ತೆ ಸುಸ್ಥಿತಿಯಲ್ಲಿ ಇಲ್ಲದ ಕಾರಣ ಬಸ್‌ಗಳು ಗ್ರಾಮದೊಳಗೆ ಬರುತ್ತಿಲ್ಲ. ವಿದ್ಯಾರ್ಥಿಗಳು ಮತ್ತು
ಗ್ರಾಮಸ್ಥರು ತೊಂದರೆ ಅನುಭವಿಸುವುದು ತಪ್ಪಿಲ್ಲ.
2,000 ಜನಸಂಖ್ಯೆ ಹೊಂದಿರುವ ರಾಮಗುರವಾಡಿ ಗ್ರಾಮದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ನರೇಗಾ ಹಾಗೂ ವಿವಿಧ ಹಣಕಾಸು ಯೋಜನೆಗಳಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗ್ರಾಮದ ಪ್ರಮುಖ ಸಂಪರ್ಕ ರಸ್ತೆ ಹಾಳಾಗಿದ್ದು, ಈ ರಸ್ತೆಯನ್ನು ದುರಸ್ತಿ ಮಾಡಿಸಬೇಕು ಎಂಬುದು ಗ್ರಾಮಸ್ಥರ ಒಕ್ಕೊರಲ ಕೋರಿಕೆ.
ಈ ವಿಷಯದ ಕುರಿತು ಗ್ರಾಮ ಸಭೆಗಳಲ್ಲಿ ಚರ್ಚಿಸಿ ಠರಾವುಗಳಲ್ಲೂ ಅಂಗೀಕರಿಸಿ ಮೇಲಧಿಕಾರಿಗಳಿಗೆ ಸಲ್ಲಿಸಲಾಗಿದೆ. ಆದರೆ ರಸ್ತೆಯ ದುರಸ್ತಿಗೆ ಯಾರೊಬ್ಬರೂ ಮುಂದಾಗಿಲ್ಲ. ರಸ್ತೆಯನ್ನು ಬೇಗ ದುರಸ್ತಿ ಮಾಡದಿದ್ದರೆ ಹೋರಾಟ ನಡೆಸುವ ತೀರ್ಮಾನವನ್ನು ಗ್ರಾಮಸ್ಥರು ಕೈಗೊಂಡಿದ್ದಾರೆ.
ಬಡಾವಣೆಗಳ ಬೇಡಿಕೆ: ಬಡಾವಣೆಗಳ ರಸ್ತೆಗಳ ಅಭಿವೃದ್ಧಿಗೆ ಅನುದಾನ ಒದಗಿಸಬೇಕೆಂಬುದು ಗ್ರಾಮಸ್ಥರ ಬಹುದಿನಗಳ ಬೇಡಿಕೆ.
ಕಳೆದ 2021ರಲ್ಲಿ ಜತ್ತ- ಜಾಂಬೋಟಿ ರಾಜ್ಯ ಹೆದ್ದಾರಿಯಿಂದ ರಾಮಗುರವಾಡಿ ಗ್ರಾಮದವರೆಗಿನ ರಸ್ತೆಯನ್ನು ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ‘ಮುಖ್ಯಮಂತ್ರಿಗಳ ಗ್ರಾಮ ಸಡಕ್ ಯೋಜನೆ’ ಅಡಿ ₹20 ಲಕ್ಷ ಅನುದಾನದಲ್ಲಿ ದುರಸ್ತಿ ಮಾಡಿಸಿದ್ದರು. ಆದರೆ, ಕಳಪೆ ಕಾಮಗಾರಿಯ ಕಾರಣ ಈ ರಸ್ತೆ ದುರಸ್ತಿಯಾದ 15 ದಿನಗಳಲ್ಲಿ ಹದಗೆಟ್ಟಿದೆ.
ಇದರಿಂದ ಮನನೊಂದು ಗ್ರಾಮಸ್ಥರು ‘ಜನವಿರೋಧಿ ನಿಲುವು ಹೊಂದಿರುವ ಇಲ್ಲಿಯ ಶಾಸಕರು, ಅಧಿಕಾರಿಗಳು ಕಾಲಿಡಬಾರದು’ ಎಂದು ನಿರ್ಬಂಧ ಹೇರಿದ್ದಾರೆ. ಊರಿನ ಪ್ರವೇಶದ್ವಾರದ ಬಳಿ ಫ್ಲೆಕ್ಸ್ ಕೂಡ ಅಳವಡಿಸಿದ್ದಾರೆ.