ಬೆಂಗಳೂರು: ರಾಜ್ಯದಲ್ಲಿ ಚರ್ಮಗಂಟು ರೋಗವನ್ನು ಹತೋಟಿಗೆ ತರಲಾಗುತ್ತಿದ್ದರೂ ಸುಮಾರು 21,305 ಜಾನುವಾರುಗಳು ಬಲಿಯಾಗಿರುವುದು ಆತಂಕ ಸೃಷ್ಟಿಸಿದೆ.
ರಾಜ್ಯದ ಸುಮಾರು 230 ತಾಲೂಕುಗಳ 15,977 ಗ್ರಾಮಗಳಲ್ಲಿ ಈವರೆಗೆ 2,37,194 ರಾಸುಗಳಿಗೆ ಚರ್ಮಗಂಟು ರೋಗ ಬಾಧಿಸಿದ್ದು, ಈ ಪೈಕಿ 1.64 ಲಕ್ಷ ರಾಸುಗಳು ಚೇತರಿಕೆಯಾಗಿವೆ.
ಇನ್ನುಳಿದ ರಾಸುಗಳಿಗೆ ಸರಕಾರದಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಸಿಬಂದಿ ಇಲ್ಲದೆ ಲಸಿಕೆ ತಲುಪುತ್ತಿಲ್ಲ ಎಂಬ ಸಂಗತಿ “ಉದಯವಾಣಿ’ ನಡೆಸಿದ ಜಿಲ್ಲಾವಾರು ಮಾಹಿತಿ ಸಂಗ್ರಹದಿಂದ ಬೆಳಕಿಗೆ ಬಂದಿದೆ.
ಮೃತಪಟ್ಟ ಜಾನುವಾರುಗಳ ಮಾಲಕರಿಗೆ ಈಗಾಗಲೇ ಮುಖ್ಯಮಂತ್ರಿಗಳು 37 ಕೋಟಿ ರೂ. ಪರಿಹಾರಧನ ನೀಡಿದ್ದು, ಬುಧವಾರದಿಂದ ಪರಿಹಾರ ವಿತರಣೆಯಾಗಲಿದೆ. ಆ.1ರಿಂದ ಅನ್ವಯವಾಗುವಂತೆ ಪ್ರತೀ ರಾಸುಗಳಿಗೆ ಗರಿಷ್ಠ 20 ಸಾವಿರ ರೂ., ಎತ್ತುಗಳಿಗೆ ರೂ.30 ಸಾವಿರ ಹಾಗೂ ಪ್ರತೀ ಕರುವಿಗೆ 5 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರಧನ ವಿತರಣೆ ಮಾಡಲಾಗುತ್ತಿದೆ.