ಬೆಳಗಾವಿ ಎಸ್‌ಸಿ- ಎಸ್‌ಟಿ ಸಮುದಾಯಗಳಿಗೆ ಮೀಸ ಲಾತಿ ಪ್ರಮಾಣ ಹೆಚ್ಚಳಕ್ಕೆ ಸರಕಾರಿ ಆದೇಶದ ಬಳಿಕ ಈಗ ಉಭಯ ಸದನಗಳಲ್ಲಿ ಮಸೂದೆ ಮಂಡಿಸಲು ಸರಕಾರ ಮುಂದಾಗಿದೆ.
ಸೋಮವಾರ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಂಡಿದ್ದು, ಎಸ್‌ಸಿ-ಎಸ್‌ಟಿ ಮೀಸಲಾತಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಸಹಿತ ಮೂರು ಪ್ರಮುಖ ಮಸೂದೆಗಳನ್ನು ಈ ವಾರದಲ್ಲೇ ಮಂಡಿಸಲು ನಿರ್ಧರಿಸಲಾಗಿದೆ.
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಮೊದಲ ವಾರದಲ್ಲೇ ಅವಕಾಶ ಕೊಟ್ಟು ಸರಕಾರದ ಪರವಾಗಿ ಉತ್ತರ ನೀಡಲೂ ಸಭೆಯಲ್ಲಿ ತೀರ್ಮಾನಿಸಲಾಯಿತು ಎನ್ನಲಾಗಿದೆ.
ಕಾಂಗ್ರೆಸ್ ಬಹಿಷ್ಕಾರ
ಕಲಾಪ ಸಲಹಾ ಸಮಿತಿಗೆ ಕಾಂಗ್ರೆಸ್ ಬಹಿಷ್ಕಾರ ಹಾಕಿತ್ತು. ಜೆಡಿಎಸ್ ಪರವಾಗಿ ಉಪ ನಾಯಕ ಬಂಡೆಪ್ಪ ಕಾಶೆಂಪುರ್ ಭಾಗವಹಿಸಿದ್ದರು. ಸದನದಲ್ಲಿ ಮಹನೀಯರ ಭಾವ ಚಿತ್ರ ಅನಾವರಣ ವಿಚಾರದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ. ಇದೊಂದು ಸಂಭ್ರಮದ ಕಾರ್ಯಕ್ರಮ ಆಗ ಬೇಕಿತ್ತು. ಆದರೆ ಕದ್ದು ಮುಚ್ಚಿ ಮಾಡಲಾಗಿದೆ. ಸದನಕ್ಕೂ ಇದರಿಂದ ಗೌರವ ಬರುವುದಿಲ್ಲ . ಹೀಗಾಗಿ ನಾವು ಕಲಾಪ ಸಲಹಾ ಸಮಿತಿ ಬಹಿಷ್ಕರಿಸಿದ್ದೇವೆ ಎಂದು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ತಿಳಿಸಿದರು.