ಹುಬ್ಬಳ್ಳಿ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಡಿ.ಕೆ. ಶಿವಕುಮಾರ ಅವರು ಯಾವುದೇ ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಬೇಡ. ಅವರು ರಾಜ್ಯಾದ್ಯಂತ ಪಕ್ಷ ಬಲಪಡಿಸುವ ಕಾರ್ಯಮಾಡಲಿ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪಕ್ಷ ಬಲಪಡಿಸುವ ಕೆಲಸ ಮಾಡಲಿ. ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ ಅಲ್ಲಿಗೆ ಸೀಮಿತವಾಗುವುದು ಬೇಡ. ಇಡೀ ರಾಜ್ಯ ಸುತ್ತಬೇಕಾಗಿರುವುದರಿಂದ ಅವರು ಸ್ಪರ್ಧಿಸದಿರುವುದು ಒಳ್ಳೆಯದು. ಇದು ನನ್ನ ವೈಯಕ್ತಿಕ ಅಭಿಪ್ರಾಯ, ಡಿ.ಕೆ. ಶಿವಕುಮಾರ ಸಹ ಒಂದು ಕ್ಷೇತ್ರದಿಂದ ಸ್ಪರ್ಧಿಸುವುದು ಬೇಡ. ರಾಜ್ಯ ಸುತ್ತಾಟ ಮಾಡಿ ಪ್ರಚಾರದಲ್ಲಿ ಇಬ್ಬರು ನಾಯಕರು ತೊಡಗಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸ್ಪರ್ಧಿಸದೆ ಅಧಿಕಾರ ನಡೆಸಬಹುದು ಎಂದರು.
ನನಗೆ ಸಿದ್ದರಾಮಯ್ಯ ಅವರು ಬಳ್ಳಾರಿ ಹೋಗಿ ಅಂತ ಹೇಳಿಲ್ಲ. ನಾಗರಾಜ ಛಬ್ಬಿ ನನ್ನ ಸ್ನೇಹಿತ, ಅವರೇ ಸಿದ್ದರಾಮಯ್ಯ ಬಳಿ ಹೋಗಿ ಸಂತೋಷ ಲಾಡ ಅವರನ್ನು ಬಳ್ಳಾರಿ ಕಳಿಸಿ ಅಂತ ಕೇಳಿಕೊಂಡಿದ್ದಾರೆ. ಅವರು ಮಾತನಾಡಿದ ವಿಚಾರವನ್ನು ಸಿದ್ದರಾಮಯ್ಯ ನನಗೆ ಹೇಳಿದ್ದಾರೆ. ಆದರೆ ನಾನು ಕಲಘಟಗಿ ಕ್ಷೇತ್ರ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ನಾಗರಾಜ ಛಬ್ಬಿ ಪ್ರತಿ ಚುನಾವಣೆಯಲ್ಲಿ ಒಂದೊಂದು ಕ್ಷೇತ್ರ ಹುಡುಕಾಟ ಮಾಡುತ್ತಾರೆ. ಈಗ ಕಲಘಟಗಿಯಲ್ಲಿ ಬಂದು ಕುಕ್ಕರ್ ಹಂಚಿಕೆ ಮಾಡುತ್ತಿದ್ದಾರೆ. 2008ರಿಂದ ಕಲಘಟಗಿಯಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದು ನಾನು. ಟಿಕೆಟ್ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಪಕ್ಷದ ನಾಯಕರು ಈ ವಿಚಾರವನ್ನು ಈಗಲೇ ಪರಿಹರಿಸಿದರೆ ಒಳ್ಳೆಯದು ಎಂದರು.