ಹಾವೇರಿ: ದೇಶದಾದ್ಯಂತ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಮೂಲಕ ಕರಾವಳಿಯ ದೈವಗಳ ಶಕ್ತಿ ಹಾಗೂ ಜನರ ನಂಬಿಕೆಗಳ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ವಿವಿಧ ಭಾಗಗಳ ಜನರು ಇದೀಗ ಕರಾವಳಿಯ ದೈವಗಳ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.
ಕರಾವಳಿ ಭಾಗದ ಜನರಿಗೆ ದೈವಗಳ ಮೇಲೆ ಹೆಚ್ಚಿನ ನಂಬಿಕೆ. ಇದೀಗ ಉತ್ತರ ಕರ್ನಾಟಕ ಭಾಗದಲ್ಲೂ ದೈವಗಳನ್ನು ನಂಬುತ್ತಿದ್ದಾರೆ. ಹೌದು, ಹಾವೇರಿ ಜಿಲ್ಲೆಯ ಕೇರಿಮತ್ತಿ ಹಳ್ಳಿಯ ಫಕ್ಕಿರೇಶ ಮರಿಯಣ್ಣ ಎಂಬುವವರ ಹೊಲದಲ್ಲಿ ಕೊರಗಜ್ಜನ ಪುಟ್ಟ ದೈವಸ್ಥಾನ ನಿರ್ಮಾಣವಾಗಿದೆ. ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ ಮುಂತಾದ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಕೊರಗಜ್ಜ ದೈವದ ಆರಾಧನೆಯಲ್ಲಿ ತೊಡಗಿದ್ದಾರೆ.
ಮಂಗಳೂರಿನ ಕುತ್ತಾರುವಿನಲ್ಲಿರುವ ಕೊರಗಜ್ಜನಿಗೂ ಕೇರಿಮತ್ತಿಹಳ್ಳಿ ಗ್ರಾಮಕ್ಕೂ ಸುಮಾರು 40 ವರ್ಷಗಳ ಹಿಂದಿನ ನಂಟಿದೆ. ಕೇರಿಮತ್ತಿಹಳ್ಳಿ ಗ್ರಾಮದ ಬಾಲಮ್ಮ ಎಂಬ ವೃದ್ಧೆ ಕುತ್ತಾರಿಗೆ ತೆರಳಿ ಕೊರಗಜ್ಜನ ಸೇವೆ ಮಾಡುತ್ತಿದ್ದರು. ಈಗ ಮೃತ ಪಟ್ಟಿರುವ ಬಾಲಮ್ಮನ ಮೊಮ್ಮಗ ಫಕ್ಕಿರೇಶ ಮರಿಯಣ್ಣನವರ ಕನಸಿನಲ್ಲಿ ಕೊರಗಜ್ಜ ಕಾಣಿಸಿಕೊಂಡು, ತಮ್ಮನ್ನು ಕೇರಿಮತ್ತಿಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸುವಂತೆ ಸೂಚಿಸಿದ್ದರಂತೆ.
ಯುವಕ ಫಕ್ಕಿರೇಶನಿಗೆ ಊರ ಹೊರಗೆ ಕೊರಗಜ್ಜನ ಕಲ್ಲು ಸಿಕ್ಕಿದೆ. ಈ ಕಲ್ಲನ್ನು ತಂದು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಿದ್ದಾರೆ. ದೈವಸ್ಥಾನದ ಜೀರ್ಣೋದ್ದಾರದ ಸಂದರ್ಭದಲ್ಲಿ ಕರಾವಳಿಯ ರಘು ಅಜ್ಜನವರು ಬಂದು ಕೋಲಾ ಸೇವೆ ನಡೆಸಿದ್ದಾರೆ ಎಂಬ ಮಾಹಿತಿಯಿದೆ.
Laxmi News 24×7