Breaking News

ಯುವ ದಸರಾ’ದಲ್ಲಿ ಕನ್ನಡ ಚಿತ್ರರಂಗದ ನಟ-ನಟಿಯರ ಸಂಗಮ

Spread the love

ಮೈಸೂರು: ಮಳೆ ನಿಂತ ಮೇಲೆ ನಿರ್ಮಾಣವಾಗಿದ್ದ ತಂಪಾದ ವಾತಾವರಣದಲ್ಲಿ ಮೂಡಿ ಬಂದ ವರ್ಣರಂಜಿತ ‘ಸ್ಯಾಂಡಲ್‌ವುಡ್‌ ನೈಟ್‌’ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ರಂಗದ ನಟ-ನಟಿಯರು ಡೈಲಾಗ್, ಹಾಡು ಮತ್ತು ನೃತ್ಯದ ಮೂಲಕ ರಂಜಿಸಿದರು.

 

ಹೊರಗೆ ಮಳೆಯಾಗುತ್ತಿದ್ದರೆ, ಒಳಗೆ ರಂಜನೆಯ ಸುರಿಮಳೆ ಜೋರಾಗಿಯೇ ಸುರಿಯಿತು.

ಯುವ ದಸರಾ ಉಪ ಸಮಿತಿಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ರಾತ್ರಿ ನಡೆದ ಯುವ ದಸರಾದಲ್ಲಿ ನಟ-ನಟಿಯರು ಸರಣಿ ಕಾರ್ಯಕ್ರಮ ನೀಡಿ ರಂಜಿಸಿದರು. ಆಗಾಗ ಪುನೀತ್‌ ರಾಜ್‌ಕುಮಾರ್‌ ನೆನಪು ಹಾದು ಹೋದರೆ, ಒಮ್ಮೊಮ್ಮೆ ‘ಡಿ ಬಾಸ್, ಡಿ ಬಾಸ್’ ಎಂದು ಕೂಗಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು.

ಉಕ್ರೇನ್‌ನ ‘ಲೇಸರ್‌ ಆಕ್ಟ್‌ ಮತ್ತು ಸಿಗ್ನೇಚರ್‌ ಗ್ರೂಪ್‌’ನ ಕಲಾವಿದರು ನೃತ್ಯ ಕಾರ್ಯಕ್ರಮ ನೀಡಿದ ನಂತರ, ಸಿನಿ ರಂಗದ ಸ್ಟಾರ್‌ಗಳು ವೇದಿಕೆಗೆ ಬರುತ್ತಿದ್ದರು. ಅನುಶ್ರೀ ನಿರೂಪಣೆ ಆರಂಭಿಸುತ್ತಿದ್ದಂತೆಯೇ ನರೆದಿದ್ದ ಯುವಜನರ ಜೋಶ್ ಹೆಚ್ಚಾಯಿತು.

ಪುನೀತ್‌ಗೆ ನಮನ: ಚಲನಚಿತ್ರ ಸಂಗೀತ ನಿರ್ದೇಶಕ ಸಾಧುಕೋಕಿಲಾ ಅವರ ‘ನೀನೆ ರಾಮಾ, ನೀನೆ ಶಾಮಾ’ ಹಾಡಿನಿಂದ ಸಂಗೀತ ಸಂಜೆಗೆ ಚಾಲನೆ ನೀಡಿದರು. ಪುನೀತ್ ಸ್ಮರಣೆಯಲ್ಲಿ ‘ಸೂಚನೆಯೂ ಯೋಚನೆಯೂ ಇರಲಿಲ್ಲ ನೀ ಹೋದ ಕಾರಣ ತಿಳಿದಿಲ್ಲ’ ಎಂದು ಹಾಡಿ ಭಾವುಕ ಕ್ಷಣಗಳನ್ನು ನಿರ್ಮಾಣ ಮಾಡಿದರು. ಸಭಿಕರು ಮೊಬೈಲ್‌ ಫೋನ್‌ ಟಾರ್ಚ್‌ ಲೈಟ್‌ ಬೆಳಗಿಸಿ ನಮಿಸಿದರು. ಅಪ್ಪುಗೆ ಜೈಕಾರವೂ ಮೊಳಗಿತು.

ನಿಧಿ ಸುಬ್ಬಯ್ಯ, ಕೃಷಿ ತಾಪಂಡ, ಸೋನು ಗೌಡ, ಹರ್ಷಿಕಾ ಪೂಣಚ್ಚ, ಧೀರನ್‌ ರಾಮ್‌ಕುಮಾರ್ ಅಪ್ಪು ಹಾಡುಗಳಿಗೆ ನೃತ್ಯ ಮಾಡಿ, ನೆರೆದಿದ್ದವರನ್ನೂ ಕುಣಿಸಿದರು.

ಜಾಕಿ ನೆನಪು: ‘ಜಾಕಿ ಸಿನಿಮಾದ ಬಹುತೇಕ ದೃಶ್ಯಗಳನ್ನು ಮೈಸೂರಿನಲ್ಲಿ ಚಿತ್ರೀಕರಿಸಿದ್ದೆವು. ಈ ನಗರದ ಬಗ್ಗೆ ಬಹಳ ಪ್ರೀತಿ ಅವರಿಗಿತ್ತು. ಬಂದವರೆಲ್ಲರಿಗೂ ಫೋಟೊ ತೆಗೆದುಕೊಳ್ಳಲು ಅವಕಾಶ ಕೊಡುತ್ತಿದ್ದರು’ ಎಂದು ಹೇಳಿ ಪುನೀತ್‌ ಜೊತೆಗಿನ ಒಡನಾಟವನ್ನು ಹರ್ಷಿಕಾ ನೆನೆದರು.

ನಂತರ ಬಂದ ನಟ ಚಿಕ್ಕಣ್ಣ ಹಾಸ್ಯದ ಮೂಲಕ ರಂಜನೆ ನೀಡಿದರು. ”ಉಪಾಧ್ಯಕ್ಷ’ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದೇನೆ. ಇದೇ ವರ್ಷ ಡಿಸೆಂಬರ್‌ನಲ್ಲಿ ತೆರೆ ಕಾಣಲಿದೆ. ಮೈಸೂರಿನಲ್ಲಿ ಗೆಲ್ಲುವ ಸಿನಿಮಾ ಇಡೀ ರಾಜ್ಯದಾದ್ಯಂತ ಗೆಲ್ಲುತ್ತದೆ. ಹಿಂದೆ-ಮುಂದೆ ಯಾರೂ ಇಲ್ಲದಿದ್ದರೂ ಕಷ್ಟಪಟ್ಟ ಬೆಳೆದು ನಾಯಕ ನಟನ ಹಂತಕ್ಕೆ ಬಂದಿದ್ದೇನೆ; ಆಶೀರ್ವದಿಸಿ’ ಎಂದು ಕೋರಿದರು. ‘ಬೊಂಬೆ ಹೇಳುತೈತೆ’ ಹಾಡನ್ನೂ ಹಾಡಿದರು. ನಂತರ ನೃತ್ಯ ಪ್ರದರ್ಶನದ ಮೂಲಕ ನಟಿ ಮಾನ್ವಿತಾ ಹರೀಶ್ ರಂಜನೆ ಮುಂದುವರಿಸಿದರು.

ಮೈಸೂರು ಹೀಗೆಯೇ ಇರಲಿ: ‘ಮೈಸೂರು ಇದೇ ರೀತಿ ಇರಬೇಕು. ಜಾಸ್ತಿ ಅಭಿವೃದ್ಧಿಪಡಿಸಬಾರದು. ಇಲ್ಲದಿದ್ದರೆ, ಈ ನಗರವೂ ಇನ್ನೊಂದು ಬೆಂಗಳೂರು ಆಗಿಬಿಡುತ್ತದೆ’ ಎಂಬ ಸಲಹೆ ರೂಪದ ಎಚ್ಚರಿಕೆ ನೀಡಿದವರು ನಟ-ನಿರ್ದೇಶಕ ಉಪೇಂದ್ರ. ಸಾಧು ಕೋಕಿಲಾ ಜೊತೆ ‘ಡೇಂಜರ್ ಫಿಫ್ಟೀನ್‌ ಟು ಟ್ವೆಂಟಿ ಡೇಂಜರ್‌’ ಹಾಡಿ, ಕೆಲವು ಡೈಲಾಗ್‌ಗಳನ್ನೂ ಹೇಳಿ ನೆರೆದಿದ್ದವರ ಮನ ಗೆದ್ದರು. ನಂತರ ನೃತ್ಯದ ಮೂಲಕ ಮೋಡಿ ಮಾಡಿದವರು ನಟಿ ನಿಶ್ವಿಕಾ ನಾಯ್ಡು. ಬಳಿಕ ನಟರಾದ ಅಭಿಷೇಕ್ ಅಂಬರೀಷ್ ಹಾಗೂ ಧನ್ವೀರ್ ಗೌಡ, ನಿರ್ದೇಶಕ ಮಹೇಶ್ ವೇದಿಕೆಯಲ್ಲಿ ಕಾಣಿಸಿಕೊಂಡರು.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ