ಪುನೀತ್ ರಾಜ್‌ಕುಮಾರ್ ಅಗಲಿಕೆಯ ನಂತರದ ಕೆಲ ದಿನಗಳ ಕಾಲ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೆಚ್ಚಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಾ ಇರಲಿಲ್ಲ. ರಾಜ್ಯ ಸರ್ಕಾರ ಏರ್ಪಡಿಸಿದ್ದ ಅಪ್ಪು ನಮನ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್ ದುಃಖ ತಡೆಯಲಾರದೇ ಕಾರ್ಯಕ್ರಮದ ಮಧ್ಯದಲ್ಲಿಯೇ ಹೊರನಡೆದಿದ್ದದರು.
ಹೀಗೆ ಅಪ್ಪು ಅಗಲಿಕೆಯ ನೋವಿನಲ್ಲಿದ್ದ ಅಶ್ವಿನಿ ಅವರಿಗೆ ಫೆಬ್ರವರಿ ತಿಂಗಳಿನಲ್ಲಿ ತಮ್ಮ ತಂದೆ ಭಾಗಮನೆ ರೇವನಾಥ್ ನಿಧನ ಮತ್ತಷ್ಟು ನೋವನ್ನು ಉಂಟು ಮಾಡಿತ್ತು.
ಪುನೀತ್ ರಾಜ್‌ಕುಮಾರ್ ಇರುವಾಗಲೇ ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಮೇಲೆ ಪಿಆರ್‌ಕೆ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಬಿದ್ದಿತ್ತು. ಹೀಗಾಗಿಯೇ ಅವರು ನವೆಂಬರ್ 16ರಂದು ಫೇಸ್‌ಬುಕ್ ಖಾತೆ ತೆರೆದು ಸಾಮಾಜಿಕ ಜಾಲತಾಣಕ್ಕೆ ಪ್ರವೇಶಿಸಿದರು. ಆ ದಿನದಂದು ಅಪ್ಪು ಅಭಿಮಾನಿಗಳ ಕುರಿತು ವಿಶೇಷವಾದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಪ್ಪು ಅಗಲಿಕೆ ಸಂದರ್ಭದಲ್ಲಿ ಎಲ್ಲಿಯೂ ತಾಳ್ಮೆ ಕಳೆದುಕೊಳ್ಳದೇ, ಅಹಿತಕರ ಘಟನೆ ನಡೆಯದಂತೆ ಜವಾಬ್ದಾರಿಯುತವಾಗಿ ನಡೆದುಕೊಂಡ ಅಭಿಮಾನಿಗಳು ಹಾಗೂ ಜನ ಸಾಮಾನ್ಯರಿಗೆ ಹಾಗೂ ಅಪ್ಪು ಅವರಂತೆ ನೇತ್ರದಾನಕ್ಕೆ ಮುಂದಾದವರಿಗೆ ತಮ್ಮ ಹಾಗೂ ತಮ್ಮ ಕುಟುಂಬದ ಪರಾವಾಗಿ ಧನ್ಯವಾದ ಸಲ್ಲಿಸಿದ್ದರು.