ಜಮೀನಿಗೆ ಸಾಗುವಳಿ ಹಕ್ಕು ನೀಡುವಂತೆ ಆಗ್ರಹಿಸಿ ಚನ್ನಮ್ಮನ ಕಿತ್ತೂರು ತಾಲೂಕಿನ ಒಂಬತ್ತು ಗ್ರಾಮಗಳ ರೈತರು “ಬೆಳಗಾವಿ ಚಲೋ” ಹೆಸರಿನಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಿದರು. ಹಕ್ಕು ಪತ್ರ ನೀಡದಿದ್ರೆ ದನ, ಕರು, ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಡಿಸಿ ಕಚೇರಿ ಮುಂದೆ ನಿರಂತರ ಪ್ರತಿಭಟನೆ ನಡೆಸುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದರು,
ಗುರುವಾರ ಕಿತ್ತೂರಿನಲ್ಲಿರುವ ರಾಣಿ ಚನ್ನಮ್ಮಾಜಿ ವೃತ್ತದ ಮುಂಭಾಗದಲ್ಲಿ ಕೆಲಕಾಲ ಧರಣಿ ನಡೆಸಿದ ರೈತರು ಹಾಗೂ ರೈತ ಮುಖಂಡರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಂಕಷ್ಟದಲ್ಲಿರುವ ರೈತರ ಬಾಳು ಸುಧಾರಣೆಯಾಗಲು ಸಾಗುವಳಿ ಹಕ್ಕು ನೀಡಬೇಕು ಎಂದು ಘೋಷಣೆ ಮೊಳಗಿಸಿದರು. ಕುಲವಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಜಾನುವಾರುಗಳ ಸಮೇತ ಧರಣಿಯಲ್ಲಿ ಪಾಲ್ಗೊಂಡರು. ನಂತರ ಕಿತ್ತೂರಿನಿಂದ ಟ್ರ್ಯಾಕ್ಟರಗಳ ಮೂಲಕ ಬೆಳಗಾವಿ ಡಿಸಿ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಬಿಷ್ಟಪ್ಪ ಶಿಂಧೆ ಎಂಬ ರೈತ ಮಾತನಾಡಿ 9 ಹಳ್ಳಿಗಳಲ್ಲಿ ಸುಮಾರು ನೂರಾರು ವರ್ಷಗಳಿಂದ ನಮ್ಮ ಹಿರಿಯ ಕಾಲದಿಂದಲೂ ನಾವು ಜೀವನ ಸಾಗಿಸುತ್ತಾ ಬಂದಿದ್ದೇವೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಖುದ್ದಾಗಿ ನಮ್ಮ ಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಗರ್‍ಹುಕುಂ ಕಾಯ್ದೆಯಲ್ಲಿ ಭೂಮಿ ಹಂಚಿಕೆ ಮಾಡುತ್ತೇವೆ ಎಂದು ಎಡಿಎಲ್‍ಆರ್ ಮತ್ತು ತಹಶೀಲ್ದಾರ್‍ನ್ನು ಕರೆಸಿ ಆದೇಶ ಹೊರಡಿಸಿದ್ದರು. ಆ ಸಂದರ್ಭದಲ್ಲಿ ಸರ್ಕಾರ ಬದಲಾದ ನಂತರ ಈಗಿನ ಸರ್ಕಾರ ಅದನ್ನು ಮೊಟಕುಗೊಳಿಸಿದೆ. ಹೀಗಾಗಿ ನಮಗೆ ಹಕ್ಕು ಪತ್ರ ನೀಡದಿದ್ರೆ ನಮ್ಮ ಎಲ್ಲಾ ದನ, ಕರುಗಳು, ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಡಿಸಿ ಕಚೇರಿ ಮುಂದೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.