Breaking News

ಸಾರ್ವಜನಿಕ ಗಣೇಶೋತ್ಸವಕ್ಕೂ ಅನುಮತಿ ಇರುವ ಕಾರಣ ಗೌರಿ- ಗಣೇಶ ಮೂರ್ತಿಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.

Spread the love

ಬೆಂಗಳೂರು: ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಪರಿಣಾಮದಿಂದಾಗಿ ಕುಸಿತಗೊಂಡಿದ್ದ ಗಣೇಶ ಮೂರ್ತಿಗಳ ಮಾರಾಟ ಈ ವರ್ಷ ಚೇತರಿಸಿಕೊಂಡಿದೆ. ಸಾರ್ವಜನಿಕ ಗಣೇಶೋತ್ಸವಕ್ಕೂ ಅನುಮತಿ ಇರುವ ಕಾರಣ ಗೌರಿ- ಗಣೇಶ ಮೂರ್ತಿಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.

ಕಳೆದ ವರ್ಷಕ್ಕಿಂತ ಈ ಸಲ ವಹಿವಾಟು ದುಪ್ಪಟ್ಟುಗೊಂಡಿದೆ. ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದವರ ಕುಟುಂಬಗಳಲ್ಲೂ ಸಂತಸ ಮನೆ ಮಾಡಿದೆ. ಕಳೆದ 2 ವರ್ಷಗಳಲ್ಲಿ ಕೇವಲ 15ರಿಂದ 20 ಲಕ್ಷ ರೂ. ಆದಾಯ ಬರುತ್ತಿತ್ತು. ಆದರೆ, ಈ ಬಾರಿ ಸುಮಾರು 35-40 ಲಕ್ಷ ರೂ. ಆದಾಯ ಗಳಿಸಿದ್ದೇವೆ ಎಂದು ಗಣೇಶ ಮೂರ್ತಿ ವ್ಯಾಪಾರಿ ಸಂತೋಷ್‌ ಕುಮಾರ್‌ ತಿಳಿಸುತ್ತಾರೆ.

 

ಪ್ರತಿ ವರ್ಷ ಗಣೇಶನ ರೂಪದಲ್ಲಿ ಬದಲಾವಣೆಗಳನ್ನು ಕಾಣುತ್ತಿದ್ದೆವು. ಆದರೆ, ಈ ಸಲ ಗಣಪನೊಂದಿಗೆ ಕೋಟ್ಯಂತರ ಅಭಿಮಾನಿಗಳ ಮನಸ್ಸು ಗೆದ್ದ ಪುನೀತ್‌ ರಾಜ್‌ಕುಮಾರ್‌ ಅವರ ಮೂರ್ತಿಗಳನ್ನು ಸಹ ತಯಾರಿಸಿರುವುದು ವಿಶೇಷ. ಇದುವರೆಗೆ ಬಂದಿರುವ ಆರ್ಡರ್‌ಗಳಲ್ಲಿ ಪುನೀತ್‌ ಮತ್ತು ಗಣೇಶ ಒಟ್ಟಿಗಿರುವ ಮೂರ್ತಿಗಳ ಸಂಖ್ಯೆಯೆ ಅಧಿಕ. ಇದರಿಂದಾಗಿ ಮೂರ್ತಿಗಳ ಸಂಖ್ಯೆಯು ಹೆಚ್ಚಾಗಿದ್ದು, ವ್ಯಾಪಾರವು ಉತ್ತಮವಾಗಿದೆ ಎಂದು ಹೇಳುತ್ತಾರೆ.

 

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಗಲಿ ವರ್ಷ ಸಮೀಪಿಸುತ್ತಿದೆ. ಆದರೂ ಅವರ ನೆನಪುಗಳು ಮಾತ್ರ ಕನ್ನಡಿಗರಿಂದ ಹಾಗೂ ಅಭಿಮಾನಿಗಳಿಂದ ಮಾಸುತ್ತಿಲ್ಲ. ಸದಾ ಒಂದಲ್ಲ ಒಂದು ಕಾರಣದಿಂದ ಮತ್ತೆ ಮತ್ತೆ ಸುದ್ದಿ ಆಗುತ್ತಿದ್ದಾರೆ. ರಾಜ್ಯದ ಪ್ರತಿ ಹಬ್ಬ ಸಮಾರಂಭಗಳಲ್ಲೂ ಪುನೀತ್‌ ರಾಜ್‌ ಕುಮಾರ್‌ ಫೋಟೋ, ಪುತ್ಥಳಿ ಮೂಲಕ ರಾರಾಜಿಸುತ್ತಿದ್ದಾರೆ. ಇತ್ತೀಚಿಗಷ್ಟೇ ರಾಜಧಾನಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆದ ಫ‌ಲ ಪುಷ್ಪ ಪ್ರದರ್ಶನ, ರಾಖೀ ಹಬ್ಬ, ಸ್ವಾತಂತ್ರ್ಯೋತ್ಸವ, ಧಾರ್ಮಿಕ ಆಚರಣೆಗಳು ಸೇರಿದಂತೆ ಎಲ್ಲಾ ಆಚರಣೆಗಳಲ್ಲಿ ಪುನೀತ್‌ ಅವರು ಮನೆ ಮಾತಾಗಿದ್ದಾರೆ ಎಂಬುದಕ್ಕೆ ಗಣೇಶ ಮೂರ್ತಿಗಳ ಜತೆ ಪುನೀತ್‌ ಮೂರ್ತಿಗೂ ಬೇಡಿಕೆ ಬರುತ್ತಿರುವುದು ಸಾಕ್ಷಿ.

 

ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ಮೈಸೂರು, ಹುಬ್ಬಳಿ, ಬೆಳಗಾವಿ, ರಾಯಚೂರು ಸೇರಿದಂತೆ ರಾಜ್ಯದ ಎಲ್ಲೆಡೆ ಅಭಿಮಾನಿಗಳು ಗಣೇಶನೊಂದಿಗೆ ಪುನೀತ್‌ ಇರುವಂತಹ ಮೂರ್ತಿಗಳು ಮಾಡಲು ಆರ್ಡರ್‌ ನೀಡಿದ್ದಾರೆ. ಗಣೇಶ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದರೂ, ದಿನದಿಂದ ದಿನಕ್ಕೆ ಆರ್ಡರ್‌ಗಳು ಬರುತ್ತಲೇ ಇವೆ. ಈ ಬಾರಿ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಈಗಾಗಲೇ 500ಕ್ಕೂ ಹೆಚ್ಚು ಗಣೇಶನೊಂದಿಗೆ ಪುನೀತ್‌ ಇರುವ ಮಣ್ಣಿನ ಮೂರ್ತಿಗಳನ್ನು ತಯಾರಿಸಲಾಗಿದೆ. ಬೆಂಗಳೂರಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿ ಮೈಸೂರಿನಿಂದ ಆರ್ಡರ್‌ಗಳು ಬಂದಿವೆ. ಅದರಲ್ಲೂ ಪುನೀತ್‌ ಇರುವಂತಹ ವಿಗ್ರಹಗಳೇ ಅಧಿಕ. ನಾವು ತಯಾರಿಸಿದ ಮೂರ್ತಿಗಳಲ್ಲಿ ಸುಮಾರು ಶೇ.80ರಷ್ಟು ಅಪ್ಪು ಮತ್ತು ಗಣಪನ ಮೂರ್ತಿಗಳನ್ನು ತಯಾರಿಸಿದ್ದೇವೆ ಎಂದು ತಿಳಿಸುತ್ತಾರೆ.

 

ಗಣೇಶನ ಜತೆ 15 ಭಂಗಿಯಲ್ಲಿ ಪುನೀತ್‌

ಗಣಪತಿ ಮತ್ತು ಪುನೀತ್‌ ಅವರು ತಬ್ಬಿಕೊಂಡಿರುವುದು, ಜತೆಗೆ ನಿಂತಿರುವುದು, ವಾಕಿಂಗ್‌ ಸ್ಟೈಲ್‌ನಲ್ಲಿ, ಗಣೇಶನೊಂದಿಗೆ ಮಾತನಾಡುತ್ತಿರುವುದು ಸೇರಿದಂತೆ ಸುಮಾರು 15 ವಿಧಗಳಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರು ಕಾಣಿಸಿಕೊಂಡಿದ್ದಾರೆ. ಸುಮಾರು ಎರಡು ಅಡಿ ಎತ್ತರದಿಂದ ಆರು ಅಡಿ ಎತ್ತರದವರೆಗೂ ಮೂರ್ತಿಗಳನ್ನು ತಯಾರಿಸಲಾಗಿದೆ.

 

ಸುಮಾರು 10 ಸಾವಿರ ಚಿಕ್ಕ ಗಣೇಶ ಮತ್ತು 400 ಸಾರ್ವಜನಿಕ ಗಣೇಶಗಳನ್ನು ತಯಾರಿಸಲಾಗಿದ್ದು, ಮೈಸೂರು, ಬೆಳಗಾವಿ, ರಾಯಚೂರಿನಿಂದಲೂ ಬುಕ್‌ ಮಾಡಿ ತೆಗೆದುಕೊಂಡಿದ್ದೇವೆ. ಕಳೆದ ವರ್ಷ ಕೇವಲ 4 ಲಕ್ಷ ಆದಾಯ ಬಂದಿತ್ತು. ಆದರೆ ಈ ಬಾರಿ ಇದುವರೆಗೆ 6ರಿಂದ 8 ಲಕ್ಷದವರೆಗೂ ಆದಾಯ ಬಂದಿದೆ.

● ಕಿರಣ್‌ ಬಾಬು, ಗಣೇಶ-ಗೌರಿ ವರ್ತಕ

 

ಷಣ್ಮುಖ, ಸುಬ್ರಹ್ಮಣ್ಯ, ಇಡುಗುಂಜಿ, ನವೀಲು ಗಣೇಶಗಳ ಜತೆಗೆ ಈ ಬಾರಿ ವಿಶೇಷವಾಗಿ ಎತ್ತಿನ ಗಾಡಿಯಲ್ಲಿ ಗಣೇಶ ಕೂತಿರುವಂತಹ ಮೂರ್ತಿಯನ್ನು ತಯಾರಿಸಲಾಗುತ್ತಿದೆ. ಚಿಕ್ಕ ಮೂರ್ತಿಗಳಿಂದ ಸಾರ್ವಜನಿಕ ಗಣೇಶಗಳವರೆಗೂ ಬುಕ್ಕಿಂಗ್‌ ಆಗುತ್ತಿದ್ದು, ಈಗಾಗಲೇ 500ಕ್ಕೂ ಹೆಚ್ಚು ಗಣೇಶಗಳನ್ನು ತಯಾರಿಸಲಾಗಿದೆ.

● ನಾಗರಾಜ, ಗಣೇಶ ವ್ಯಾಪಾರಿ

 

ಈ ಬಾರಿ ನಿರೀಕ್ಷೆಗೂ ಮೀರಿದ ಆರ್ಡರ್‌ಗಳು ಬಂದಿವೆ. ಅದರಲ್ಲೂ ಗಣಪನೊಂದಿಗೆ ಪುನೀತ್‌ ಇರುವ ಮೂರ್ತಿಗಳ ಸಂಖ್ಯೆಯೆ ಹೆಚ್ಚು. ಇನ್ನೂ ಆರ್ಡರ್‌ ಗಳ ಬರುತ್ತಲೇ ಇವೆ. ಈ ಬಾರಿ ವ್ಯಾಪಾರವು ಚೆನ್ನಾಗಿ ಆಗುತ್ತಿರುವುದರಿಂದ ತಯಾರಿಕರಿಗೂ ಸಂಬಳ ಹೆಚ್ಚಿಸಲಾಗಿದೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ