ರಾಯಚೂರು: ಒಬ್ಬರಿಂದ ಒತ್ತಾಯಪೂರಕವಾಗಿ ಧರ್ಮಾಚರಣೆ ಮಾಡಿಸುವುದು ಸರಿಯಲ್ಲ. ಇನ್ನೊಬ್ಬರ ಧರ್ಮದ ಬಗ್ಗೆ ಅಗೌರವ ತೋರಿಸದೇ ನಮ್ಮ ಧರ್ಮ ಆಚರಿಸಬೇಕು. ಇದನ್ನು ಎಲ್ಲರೂ ಅರ್ಥೈಸಿಕೊಂಡು ಸೌಹಾರ್ದವಾಗಿ ಬಾಳಬೇಕು ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.
ಮಂತ್ರಾಲಯದಲ್ಲಿ ಭಾನುವಾರ ಶ್ರೀ ರಾಘವೇಂದ್ರ ಸ್ವಾಮಿಗಳವರ 351ನೇ ಉತ್ತರಾರಾಧನೆ ನಿಮಿತ್ತ ಶ್ರೀ ಪ್ರಹ್ಲಾದರಾಜರ ಮಹಾರಥೋತ್ಸವಕ್ಕೆ ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ನಾವೆಲ್ಲ ಹಿಂದೂಗಳು. ಸನಾತನ ಭಾರತೀಯ ಹಿಂದೂ ಸಂಸ್ಕೃತಿ ಆಚರಿಸಬೇಕು. ಅವರವರಿಗೆ ಅವರ ಧರ್ಮವೇ ಶ್ರೇಷ್ಠ. ದೇಶದಲ್ಲಿ ಶಾಂತಿ-ಸೌಹಾರ್ದತೆ ನೆಲೆಸಲಿ. ಪ್ರತಿಯೊಬ್ಬರೂ ಜಾತಿ, ಕೋಮು ಸಂಘರ್ಷಗಳಿಗೆ ಆಸ್ಪದ ನೀಡದೇ ಸೌಹಾರ್ದತೆಯಿಂದ ಜೀವನ ನಡೆಸಬೇಕು. ಭಕ್ತರು ಬೇಡಿದ ವರಗಳನ್ನು ನೀಡುವ ಕರುಣಾಮಯಿ ಶ್ರೀ ರಾಘವೇಂದ್ರ ಸ್ವಾಮಿಗಳು. ವಿಶ್ವದ ಮೂಲೆ ಮೂಲೆಗಳಲ್ಲಿ ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ಶ್ರೀ ಗುರುರಾಯರು ಪರಿಹರಿಸಿದ್ದಾರೆ. ಅದಕ್ಕೆ ಭಕ್ತರ ಅನುಭವಗಳೇ ಸಾಕ್ಷಿ. ಇದೇ ಕಾರಣಕ್ಕೆ ರಾಯರು ವಿಶ್ವಗುರುವಾಗಿದ್ದಾರೆ. ಶ್ರೀರಾಯರು ಬೃಂದಾನವಸ್ಥರಾಗಿ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ. ಇಂಥ ಗುರುಗಳ ಅನುಗ್ರಹ ಎಲ್ಲರಿಗೂ ಸಿಗುವಂತಾಗಲಿ ಎಂದರು.
ಕೋವಿಡ್ ಸಂಕಷ್ಟದಿಂದ ಎರಡು ವರ್ಷ ಆರಾಧನಾ ಮಹೋತ್ಸವ ಸರಳವಾಗಿ ಆಚರಣೆ ಮಾಡಲಾಗಿತ್ತು. ಈಗ ಮತ್ತೆ ಪರಿಸ್ಥಿತಿ ಸುಧಾರಿಸಿದ್ದು, ಮೊದಲಿನ ವೈಭವದಲ್ಲಿ ರಾಯರ ಆರಾಧನೆ ನಡೆದಿದೆ. ಮತ್ತೆ ಇಂಥ ಸಂಕಷ್ಟದ ದಿನಗಳು ಬಾರದಿರಲಿ ಎಂದು ಎಲ್ಲರೂ ಹಾರೈಸೋಣ.