ವಿಜಯಪುರ: ಕಾಳರಾತ್ರಿ, ನಿರವ ಮೌನ, ನಾಯಿಗಳ ಬೊಗಳುವಿಕೆಯ ಸದ್ದು, ಗಾಬರಿಗೊಂಡು ಮನೆಯಿಂದ ಹೊರಬಂದ ನಿವಾಸಿಗಳಿಗೆ ಕಂಡಿದ್ದು ದೊಣ್ಣೆ ಹಿಡಿದುಕೊಂಡು, ಮುಸುಕು ಧರಿಸಿ ಹೊರಟಿದ್ದ ದಾಂಡಿಗರ ಪಡೆ….!
ಅಬ್ಬಾ ಏನಿದು? ಯಾರು ಈ ಮುಸುಕುಧಾರಿಗಳು?
ಎಲ್ಲಿಗೆ ಹೊರಟಿದ್ದಾರೆ? ಎಂದು ಅರಿಯದ ಜನ ಆತಂಕದಿಂದಲೇ ಮನೆಯ ಬಾಗಿಲು, ಕಿಟಕಿ ಹಾಕಿಕೊಂಡು ಬೆಚ್ಚಗೆ ಮಲಗಿಕೊಂಡಿದ್ದಾರೆ. ಆದರೆ, ರಾತ್ರಿ ಪೆಟ್ರೋಲಿಂಗ್‌ನಲ್ಲಿದ್ದ ಪೊಲೀಸರು ನಾಯಿಗಳ ಜೋರಾದ ಬೊಗಳುವಿಕೆಯ ಸದ್ದು ಕೇಳಿ ಆ ಬಡವಾಣೆಗೆ ಕಾಲಿಟ್ಟರೆ ಇದ್ದಕ್ಕಿದ್ದಂತೆ ಎಲ್ಲರೂ ಮಂಗಮಾಯ.
ಅಂದ ಹಾಗೆ ಇದು ನಡೆದಿದ್ದು ಗುಮ್ಮಟ ನಗರಿ ಖ್ಯಾತಿಯ ವಿಜಯಪುರದ ಕನಕದಾಸ ಬಡಾವಣೆಯಲ್ಲಿ. ಕಳದೊಂದು ವಾರದ ಹಿಂದೆಯೇ ಇಂಥದ್ದೊಂದು ಚಿತ್ರಣ ಕಂಡು ಬಂದಿದ್ದು ಇದೀಗ ಸಿಸಿ ಟಿವಿ ದೃಶ್ಯಾವಳಿಗಳು ನಗರವಾಸಿಗಳನ್ನು ಬೆಚ್ಚಿ ಬೀಳಿಸಿದೆ.
ಬನಿಯನ್ ಹಾಗೂ ಚಡ್ಡಿ ಮೇಲಿದ್ದ ಆರೇಳು ದಾಂಡಿಗರು ದೊಡ್ಡದೊಂದು ದೊಣ್ಣೆ ಹಿಡಿದುಕೊಂಡು ಬಡಾವಣೆಯಲ್ಲಿ ಸಂಚರಿಸುತ್ತಿದ್ದ ದೃಶ್ಯ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಂತೂ ನಿಜ. ಆದರೆ, ಯಾವುದೇ ಕುಕೃತ್ಯ ನಡೆದಿಲ್ಲ ಎಂಬುದೇ ಸಮಾಧಾನ ಸಂಗತಿ. ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಇದೀಗ ರಾತ್ರಿ ಪೆಟ್ರೋಲಿಂಗ್ ವ್ಯವಸ್ಥೆ ಬಿಗಿಗೊಳಿಸಿದ್ದಾರೆ. ಮುಫ್ತಿಯಲ್ಲಿ ಪೊಲೀಸರು ಕಾರ್ಯಾಚರಿಸುತ್ತಿದ್ದಾರೆ. ಲಾಡ್ಜ್‌ಗಳನ್ನು ಚೆಕ್ ಮಾಡಲಾಗಿದೆ.