ಬೆಂಗಳೂರು: ಪಿಎಸ್‍ಐ ನೇಮಕಾತಿ ಹಗರಣದ ತನಿಖೆ ನಡೆಸಿರುವ ಸಿಐಡಿ ಅಧಿಕಾರಿಗಳು ಇಂದು ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್‍ಗೆ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ 30 ಆರೋಪಿಗಳ ವಿರುದ್ಧ ಈ ದೋಷಾರೋಪ ಪಟ್ಟಿಯಲ್ಲಿ ಮಾಹಿತಿ ಇದೆ.
ಇದು ಒಟ್ಟು 3,065 ಪುಟಗಳನ್ನು ಒಳಗೊಂಡಿದೆ. 202 ಸಾಕ್ಷ್ಯಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ, ಈ ದೋಷಾರೋಪ ಪಟ್ಟಿಯಲ್ಲಿ ಎಡಿಜಿಪಿ ಅಮೃತ್‍ಪೌಲ್ ಹೇಳಿಕೆ ಬಗ್ಗೆ ಎಲ್ಲಿಯೂ ಉಲ್ಲೇಖವಾಗಿಲ್ಲ. ಮುಂದಿನ ಚಾರ್ಜ್‍ಶೀಟ್‍ನಲ್ಲಿ ಎಡಿಜಿಪಿ ವಿಚಾರವನ್ನು ಪ್ರಸ್ತಾಪಿಸಲು ಸಿಐಡಿ ಚಿಂತನೆ ನಡೆಸಿದೆ.
ಪಿಎಸ್‍ಐ ಕೇಸ್‍ನ ಸಿಐಡಿ ಚಾರ್ಜ್‍ಶೀಟ್: 27 ಅಭ್ಯರ್ಥಿಗಳ ಜೊತೆ ಅಮೃತ್‍ಪೌಲ್ ಅಂಡ್ ತಂಡ ಡೀಲ್ ಮಾಡಿಕೊಂಡಿತ್ತು. ತಲಾ 60 ಲಕ್ಷ ಹಣಕ್ಕಾಗಿ ಅಭ್ಯರ್ಥಿಗಳ ಜೊತೆ ಡೀಲ್ ಆಗಿತ್ತು. ಅಮೃತ್‍ಪೌಲ್‍ಗೆ 50% ಹಣ ನೀಡುವ ಬಗ್ಗೆ ಒಪ್ಪಂದವಾಗಿತ್ತು. ಪರೀಕ್ಷೆಗೂ ಮುನ್ನ ತಲಾ 5 ಲಕ್ಷದ ಹಾಗೇ 1.36 ಕೋಟಿ ಅಮೃತ್‍ಪೌಲ್‍ಗೆ ಸಂದಾಯವಾಗಿದೆ.
27 ಅಭ್ಯರ್ಥಿಗಳಿಂದ ಮುಂಗಡವಾಗಿ ಒಟ್ಟು 3.59 ಕೋಟಿ ಸಂಗ್ರಹವಾಗಿದ್ದು, ಪ್ರಕರಣ ದಾಖಲಾದ ಬಳಿಕ 2.5 ಕೋಟಿ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಎಡಿಜಿಪಿಗೆ ಹಣ ನೀಡಿ ಡಿವೈಎಸ್ಪಿ ಶಾಂತಕುಮಾರ್ ಅವರು ಸ್ಟ್ರಾಂಗ್ ರೂಂ ಕೀ ಪಡೆದಿದ್ದರು. 3 ಗಂಟೆ ಸಿಸಿಟಿವಿ ಆಫ್ ಮಾಡಿ ಓಎಂಆರ್ ಶೀಟ್ ತಿದ್ದಿರುವ ಬಗ್ಗೆ ಉಲ್ಲೇಖವಾಗಿದೆ.