ಪ್ರವಾಹ (Flood) ಬಂದಾಗ ಮಾತ್ರ ನೆನಪಾಗೋ ಗ್ರಾಮ ಮತ್ತೆ ಅವರಿಗೆ ನೆನಪಾಗೋದು ಚುನಾವಣೆ (Election) ಬಂದಾಗ ಮಾತ್ರ. ಮಹಾರಷ್ಟ್ರ ಭಾಗದಲ್ಲಿ ವರುಣನ ಆರ್ಭಟ ಹೆಚ್ಚಾದರೆ ಇತ್ತ ಕಲ್ಯಾಣ ಕರ್ನಾಟಕದ ಹಲವು ಭಾಗಗಳು ಜಲಾವೃತಗೊಳ್ಳುತ್ತವೆ. ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ, ವಡಗೇರಾ, ಹುಣಸಗಿ ತಾಲೂಕುಗಳ ವ್ಯಾಪ್ತಿಯಲ್ಲಿ ಕೃಷ್ಣೆ ಭೋರ್ಗರೆಯುತ್ತದೆ.
ಪ್ರತಿವರ್ಷ ಕೃಷ್ಣಾ ನದಿಯ ಪ್ರವಾಹವಾಗುತ್ತದೆ. ಅಷ್ಟೆ ಅಲ್ಲಾ ಕೃಷ್ಣಾ ನದಿ ಪಾತ್ರದ ಸರಿ ಸುಮಾರು 40ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಳ್ಳುತ್ತವೆ. ಕೃಷ್ಣಾ ಹಿನ್ನೀರಿಗೆ ವಡಗೇರಾ ತಾಲೂಕಿನ ಯಕ್ಷಿಂತಿ, ಗೌಡೂರು ಗ್ರಾಮಗಳಿಗೆ ಕೃಷ್ಣಾ ನದಿ ನೀರು ನುಗ್ಗಿ ಗ್ರಾಮಗಳು ಜಲಾವೃತವಾಗುತ್ತವೆ.
2019 ರಲ್ಲಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಅವಧಿಯಲ್ಲೂ ಕೃಷ್ಣಾ ನದಿ ನೀರು ನುಗ್ಗಿ ಗ್ರಾಮಗಳು ಜಲಾವೃತಗೊಂಡಿದ್ದವು. ಖುದ್ದು ಯಡಿಯೂರಪ್ಪನವರೇ ಯಕ್ಷಿಂತಿ, ಗೌಡೂರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಗಳು ಸ್ಥಳಾಂತರ ಮಾಡುವ ಭರವಸೆ ನೀಡಿದ್ದರು.
ಗ್ರಾಮಸ್ಥರು
ಗ್ರಾಮಗಳ ಸ್ಥಳಾಂತರ ಮಾಡುವ ಬಗ್ಗೆ ಅಗತ್ಯ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಆದರೆ ಅಧಿಕಾರಿಗಳು ಪ್ರವಾಹ ತಗ್ಗಿದ ನಂತರ ಯಾವುದೇ ಸ್ಥಳಾಂತರ ಮಾಡುವ ಕೆಲಸ ಮಾಡಿಲ್ಲ.
ಭರವಸೆ ನೀಡಿದ್ರು ಸಚಿವ ಪ್ರಭು ಚವಾಣ್
ಯಾದಗಿರಿ ಉಸ್ತುವಾರಿ ಸಚಿವ ಪ್ರಭು ಚವ್ಹಾಣ (Minister Prabhu Chavan) ಸಹ ಖುದ್ದಾಗಿ ಭೇಟಿ ನೀಡಿ ಗ್ರಾಮಗಳ ಸ್ಥಳಾಂತರ ಮಾಡಿ ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದ್ರೆ ಈಗ ಮತ್ತೆ ಮುಂಗಾರು ಆರಂಭವಾಗಿದ್ದು, ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣೆ ಭೋರ್ಗರೆಯುತ್ತಿದೆ.
ಈಗಾಗಲೇ ಕೃಷ್ಣಾ ನದಿ ನೀರು ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿವೆ. ಇದೇ ರೀತಿ ಇನ್ನು ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ್ರೆ ಗ್ರಾಮಗಳು ಜಲಾವೃತಗೊಳ್ಳೊದು ಕಟ್ಟಿಟ್ಟ ಬುತ್ತಿಯಾಗಿದೆ.
ಇದರಿಂದಾಗಿ ಗ್ರಾಮಸ್ಥರು ಪ್ರತಿ ನಿತ್ಯ ಜೀವ ಕೈಯಲ್ಲಿ ಹಿಡಿದು ಜೀವನ ನಡೆಸುವಂತಾಗಿದೆ. ಸದ್ಯ ವರುಣ ಕೊಂಚ ರೀಲಿಫ್ ನೀಡಿದ್ದಾನೆ. ಸರ್ಕಾರ ಈಗಲಾದರು ಇತ್ತ ಗಮನಿಸಿ ಗ್ರಾಮಗಳು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸಚಿವ ,ಶಾಸಕರ ವಿರುದ್ಧ ಗ್ರಾಮಸ್ಥರ ಅಕ್ರೋಶ
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಯಾದಗಿರಿ ಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ನೆಮ್ಮದಿಯಾಗಿ ಮನೆಯಲ್ಲಿ ವಾಸ ಮಾಡುತ್ತಾರೆ. ಆದರೆ, ಕೃಷ್ಣಾ ನದಿಯ ಪ್ರವಾಹ ಬಂದಾಗ ನದಿ ತೀರದ ಗ್ರಾಮಸ್ಥರು ನರಕಯಾತನೆ ಜೀವನ ನಡೆಸುತ್ತಾರೆ.
ಗ್ರಾಮಸ್ಥರು
ಶಾಸಕ ಹಾಗೂ ಸಚಿವರಿಗೆ ನದಿ ತೀರದ ನರಕಯಾತನೆ ಜೀವನ ಕಾಳಜಿ ಇದ್ದರೆ ಸ್ಥಳಾಂತರ ಮಾಡುವ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಬಡವರ ಕಾಳಜಿ ಕಾಣುತ್ತಿಲ್ಲ. ಅದೆ ಅಧಿಕಾರಿಗಳು ಕೂಡ ನಿರ್ಲಕ್ಷ್ಯ ತೋರಿದ್ದು ಜನರ ಅಕ್ರೋಶಕ್ಕೆ ಕಾರಣವಾಗಿದೆ.
ಚುನಾವಣೆಯಲ್ಲಿ ಪಾಠ
ಕ್ಯಾಮೆರಾಗಳ ಮುಂದೆ ಫೋಸ್ ಕೊಟ್ಟ ಜನಪ್ರತಿನಿಧಿಗಳು ಸ್ಥಳಾಂತರ ಮಾಡುತ್ತೆವೆಂದು ಸುಳ್ಳು ಭರವಸೆ ನೀಡಿದ್ದಾರೆ. ಸುಳ್ಳು ಹೇಳುವ ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸುತ್ತೆವೆಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.