ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರ ನಡುವಿನ ಗುಸುಗುಸು ಮಾತುಕತೆಯು ವಿಧಾನಸೌಧ ಮೊಗಸಾಲೆಯಲ್ಲಿ ನೋಡಿದವರ ಕುತೂಹಲ ಕೆರಳಿಸಿತು.
ರಾಷ್ಟ್ರಪತಿ ಚುನಾವಣೆಗಾಗಿ ಮತ ಚಲಾಯಿಸಿ ಹೊರ ಬಂದ ಜಿ.ಟಿ.ದೇವೇಡರಿಗೆ ಮೊಗಸಾಲೆಯಲ್ಲಿ ಡಿಕೆಶಿ ಎದುರಾದರು.
ಡಿಕೆಶಿ ಅವರು ಹೆಗಲ ಮೇಲೆ ಕೈ ಹಾಕುತ್ತಿದ್ದಂತೆ ಜಿಟಿಡಿ ಏನೋ ಮಾತನಾಡಲು ಬಯಸಿದರು. ತಕ್ಷಣವೇ ಜಿಟಿಡಿ ಅವರನ್ನು ಡಿಕೆಶಿ ಪಕ್ಕಕ್ಕೆ ಕರೆದುಕೊಂಡು ಹೋಗಿ ಕೆಲ ದನಿಯಲ್ಲಿ ಒಂದು ನಿಮಿಷ ಮಾತನಾಡಿದರು. ಇದಾದ ಬಳಿಕ ಇಬ್ಬರೂ ಪರಸ್ಪರ ಕೈಕುಲುಕಿ ಜಾಗ ಖಾಲಿ ಮಾಡಿದರು. ಡಿಕೆಶಿ ಮತದಾನ ಕೇಂದ್ರದತ್ತ ಹೆಜ್ಜೆಯಿಟ್ಟರೆ, ಜಿಟಿಡಿ ವಿಧಾನಸೌಧ ಮೊದಲ ಮಹಡಿ ಲಿಫ್ಟ್ನತ್ತ ನಡೆದರು.
ಈಗಾಗಲೇ ಜೆಡಿಎಸ್ನಿಂದ ಒಂದು ಕಾಲು ಹೊರಗಿಟ್ಟಿರುವ ಜಿ.ಟಿ.ದೇವೇಗೌಡರು ಮುಂದಿನ ನಡೆಯನ್ನು ಗೌಪ್ಯವಾಗಿಟ್ಟಿದ್ದಾರೆ. ಒಮ್ಮೆ ಕಾಂಗ್ರೆಸ್, ಮಗದೊಮ್ಮೆ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಚರ್ಚೆಯಲ್ಲಿದ್ದು, ಕ್ಷೇತ್ರದ ಜನರು, ಕಾರ್ಯಕರ್ತರು, ಹಿತೈಷಿಗಳು, ಬೆಂಬಲಿಗರ ಜತೆಗೆ ಚರ್ಚಿಸಿ ತೀರ್ಮಾನಿಸುವೆ ಎಂದು ಹಲವು ಬಾರಿ ಹೇಳಿರುವುದನ್ನು ಸ್ಮರಿಸಬಹುದು.