ಬೆಂಗಳೂರು: ಹೌದು ಸ್ವಾಮಿ… ಈ ಪದ ಕೇಳಿದರೆ ಥಟ್ ಅಂತಾ ನೆನಪಾಗುವುದು ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್. ಈಗಾಗಲೇ ಯಶಸ್ವಿ 8 ಆವೃತ್ತಿಗಳನ್ನು ಮುಗಿಸಿದ್ದು, 9 ನೇ ಆವೃತ್ತಿಯ ಬಿಗ್ಬಾಸ್ ಶೋಗೆ ಭರ್ಜರಿ ತಯಾರಿ ನಡೆದಿದೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ಬಾದ್ಷಾ ಕಿಚ್ಚ ಸುದೀಪರ ಪಂಚಾಯಿತಿಯಲ್ಲಿ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯ ಪಡೆದುಕೊಂಡಿದೆ. ಈ ಶೋ ಕಲರ್ಸ್ ಕನ್ನಡದಲ್ಲಿ ಮೂಡಿ ಬರಲಿದೆ. ಈ ಬಾರಿಯ ವಿಶೇಷ ಏನೆಂದರೆ, ಟಿವಿ ಮತ್ತು ಒಟಿಟಿಯಲ್ಲಿ ಎರಡು ಕಡೆ ಪ್ರದರ್ಶನವಾಗಲಿದೆ. ಎರಡೂ ಕಡೆ ಕಿಚ್ಚನದ್ದೇ ನಿರೂಪಣೆ ಇರಲಿದೆ.
ಈಗಾಗಲೇ 8 ಆವೃತ್ತಿ ಮುಗಿಸಿದ್ದು, 9ನೇ ಆವೃತ್ತಿ ಯಾವಾಗ? ಎಂಬ ಬಹುತೇಕರ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದೆ. ದಿನಾಂಕ ಘೋಷಣೆಯಾಗಿಲ್ಲದಿದ್ದರೂ ಇನ್ನೂ ಕೆಲವೇ ದಿನಗಳಲ್ಲಿ ಶೋ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಈಗಾಗಲೇ ಕಿಚ್ಚ ಸುದೀಪ್ ಅವರು ಬಿಗ್ಬಾಸ್ ಪ್ರೋಮೋ ಶೂಟ್ನಲ್ಲಿ ಭಾಗಿಯಾಗಿ ಬಂದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಿನ್ನೆ ಬಿಬಿಕೆ9 (#BBK9) ಹ್ಯಾಷ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡಿಂಗ್ನಲ್ಲಿಯೂ ಇತ್ತು. ಅಲ್ಲದೆ, ಈಗಾಗಲೇ ಬಿಗ್ಬಾಸ್ ಕನ್ನಡ 9 ಹೆಸರಿನಲ್ಲಿ ಕಲರ್ಸ್ ಕನ್ನಡ ಟ್ವಿಟರ್ ಖಾತೆಯನ್ನೂ ತೆರೆದಿದೆ.
ಒಂದು ಮೂಲಗಳ ಪ್ರಕಾರ ಬಿಗ್ಬಾಸ್ ಶೋ ಆಗಸ್ಟ್ ತಿಂಗಳ ಕೊನೆ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಖಚಿತವಾಗಿ ಇನ್ನು ತಿಳಿದಿಲ್ಲ. ಪ್ರೋಮೋ ಬಂದ ಬಳಿಕ ಎಲ್ಲವೂ ಗೊತ್ತಾಗಲಿದೆ. ಒಟ್ಟಿನಲ್ಲಿ ಬಿಗ್ಬಾಸ್ ಶುರುವಾಗುವುದಂತೂ ಖಂಡಿತ. ಇಷ್ಟೆಲ್ಲ ಹೇಳಿದ ಬಳಿಕ ನಿಮ್ಮ ತಲೆಗೆ ಬರುವ ಮೊದಲ ಪ್ರಶ್ನೆಯೆಂದರೆ, ಈ ಬಾರಿ ಬಿಗ್ಬಾಸ್ನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದು. ಅದಕ್ಕೆ ಉತ್ತರ ಮುಂದಿದೆ ಓದಿ. ಈ ಬಾರಿ ಒಳ್ಳೊಳ್ಳೆ ಸ್ಪರ್ಧಿಗಳನ್ನು ದೊಡ್ಮನೆಯೊಳಗೆ ಕಳಹಿಸಲು ಬಿಗ್ಬಾಸ್ ತಂಡ ಪ್ಲಾನ್ ಮಾಡಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಕೆಲವರ ಹೆಸರು ಓಡಾಡುತ್ತಿದೆ. ವದಂತಿಗಳ ಪ್ರಕಾರ ಈ ಬಾರಿ ಬಿಗ್ಬಾಸ್ ಮನೆ ಪ್ರವೇಶಿಸಲಿರುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ…
1. ಚಂದನ್ ಶರ್ಮಾ
ಚಂದನ್ ಶರ್ಮಾ ಅವರು ವೃತ್ತಿಪರ ಸುದ್ದಿ ನಿರೂಪಕ ಹಾಗೂ ಕಿರಿಯ ಕಾರ್ಯನಿರ್ವಾಹಕ ಸಂಪಾದಕ. ಅಲ್ಲದೆ, ಇವರಿಗೆ ಹಾಸ್ಯ ಪ್ರಜ್ಞೆಯು ಚೆನ್ನಾಗಿದ್ದು, ಈ ಬಾರಿ ಬಿಗ್ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
2. ವಿನಯ್ ಕುಮಾರ್
ವಿನಯ್ ಕುಮಾರ್ ಅವರು ಟೀಮ್ ಇಂಡಿಯಾದ ಮಾಜಿ ಆಟಗಾರ. ಅನೇಕ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮತ್ತು ಇಪ್ಪತ್ತು ಟಿ20 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಇವರನ್ನು ಧಾರವಾಡದ ಎಕ್ಸ್ಪ್ರೆಸ್ ಅಂತಲೂ ಕರೆಯುತ್ತಾರೆ.
3. ನವೀನ್ ಕೃಷ್ಣ
ನವೀನ್ ಕೃಷ್ಣ ಓರ್ವ ಕನ್ನಡದ ಕಲಾವಿದ, ಬರಹಗಾರ ಮತ್ತು ನಿರ್ದೇಶಕ. ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರ ಪುತ್ರ.
4. ಟೆನ್ನಿಸ್ ಕೃಷ್ಣ
ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟರಾಗಿರುವ ಟೆನ್ನಿಸ್ ಕೃಷ್ಣ ಈ ಬಾರಿ ಬಿಗ್ಬಾಸ್ ಮನೆ ಪ್ರವೇಶಿಸುವ ಸಾಧ್ಯತೆ ಇದೆ. ಸದ್ಯ ಸಿನಿಮಾ ಅವಕಾಶಗಳ ಕೊರತೆ ಎದುರಿಸುತ್ತಿರುವ ಟೆನ್ನಿಸ್ ಕೃಷ್ಣ ಅವರಿಗೆ ಬಿಗ್ಬಾಸ್ ಸೂಕ್ತ ಸಮಯದಲ್ಲಿ ಸೂಕ್ತ ವೇದಿಕೆ ಎನ್ನಲಾಗುತ್ತಿದೆ. ಒಂದು ವೇಳೆ ಟೆನ್ನಿಸ್ ಕೃಷ್ಣ ಅವರು ಬಿಗ್ಬಾಸ್ ಮನೆ ಪ್ರವೇಶಿಸಿದ್ದಲ್ಲಿ ಮನೆರಂಜನೆಗಂತೂ ಕೊರತೆ ಇರುವುದಿಲ್ಲ.
5. ಆಶಾ ಭಟ್
ಆಶಾ ಭಟ್ ಭಾರತೀಯ ಗಾಯಕಿಯಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಜನಪ್ರಿಯತೆಯನ್ನು ಗಳಿಸಿದ್ದಾರೆ. ಜೀ ಕನ್ನಡದ ಸರಿಗಮಪದಲ್ಲಿ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದ ಸೀಸನ್ 17ರ ಸೆಮಿ ಫೈನಲಿಸ್ಟ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.
6. ರವಿ ಶ್ರೀವಾತ್ಸವ
ರವಿ ಶ್ರೀವಾತ್ಸವ ಕನ್ನಡದ ಪ್ರಖ್ಯಾತ ನಿರ್ದೇಶಕ. ಗಂಡ ಹೆಂಡತಿ, ಡೆಡ್ಲಿ ಸೋಮದಂತಹ ಯಶಸ್ವಿ ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ.
7. ತರುಣ್ ಚಂದ್ರ
ನಟ ತರುಣ್ ಚಂದ್ರ ಎಲ್ಲರಿಗೂ ಪರಿಚಿತರಾಗಿರುವ ಸ್ಪುರದ್ರೂಪಿ ನಟ. 2003ರಲ್ಲಿ ಖುಷಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಲವ್ ಗುರು, ಗಾನ ಬಜಾನ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್)ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಆಡಿದ್ದಾರೆ.
8. ನಮ್ರತಾ ಗೌಡ
ನಮ್ರತಾ ಗೌಡ ಖ್ಯಾತ ಕಿರುತೆರೆ ಕಲಾವಿದೆ. ಕೆಲ ಧಾರವಾಹಿಗಳಲ್ಲಿ ನಮ್ರತಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ನಾಗಿನಿ 2 ಧಾರವಾಹಿಯಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಜನಮನ್ನಣೆ ಗಳಿಸಿದ್ದಾರೆ.
9. ರೇಖಾ ವೇದವ್ಯಾಸ್
ನಟಿ ರೇಖಾ ವೇದವ್ಯಾಸ್ ಕನ್ನಡಿಗರಿ ಚಿರಪರಿಚಿತರಾಗಿದ್ದಾರೆ. ಏಕೆಂದರೆ, ಕಿಚ್ಚ ಸುದೀಪ್ಸಿನಿ ಕೆರಿಯರ್ನಲ್ಲಿ ದೊಡ್ಡ ಯಶಸ್ಸು ತಂದುಕೊಟ್ಟ ಹುಚ್ಚ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ರೇಖಾ ನಟಿಸಿದ್ದಾರೆ. ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.
10. ಭೂಮಿಕ ಬಸವರಾಜ್
ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರು ಅಥವಾ ಇನ್ಸ್ಟಾಗ್ರಾಂ ರೀಲ್ಸ್ ನೋಡುವವರಿಗೆ ಭೂಮಿಕ ಬಸವರಾಜ್ ಚೆನ್ನಾಗಿ ತಿಳಿದಿರುತ್ತದೆ. ತಮ್ಮ ಅದ್ಭುತ ಹಾಗೂ ಹಾಟ್ ಡಾನ್ಸ್ ಮೂಲಕವೇ ಭೂಮಿಕಾ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿದ್ದಾರೆ.
11. ಪ್ರೇಮಾ
ನಟಿ ಪ್ರೇಮಾ ಯಾರಿಗೆ ತಾನೆ ಗೊತ್ತಿಲ್ಲ. ತುಂಬಾ ವರ್ಷಗಳ ಬಳಿಕ ಮತ್ತೆ ಸಿನಿಮಾ ಲೋಕದಲ್ಲಿ ಸಕ್ರಿಯರಾಗಿರುವ ಪ್ರೇಮಾ ಕೆಲವೊಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ವೆಡ್ಡಿಂಗ್ ಗಿಫ್ಟ್ ಕೂಡ ಒಂದು. ಓಂ, ಯಜಮಾನದಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಪ್ರೇಮಾ ಅವರು ಬಿಗ್ಬಾಸ್ ಮನೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
12. ಮಿಮಿಕ್ರಿ ಗೋಪಿ
ಗೋಪಿ ಅವರ ಹಾಸ್ಯ, ಮಿಮಿಕ್ರಿ ಮತ್ತು ನಗು ತರಿಸುವ ಒನ್-ಲೈನ್ ಡೈಲಾಗ್‌ಗಳಿಂದ ಜನಪ್ರಿಯರಾಗಿದ್ದಾರೆ.
13. ದಿಲೀಪ್ ರಾಜ್
ದಿಲೀಪ್ ರಾಜ್ ಕನ್ನಡ ಮನರಂಜನಾ ಉದ್ಯಮದ ಯಶಸ್ವಿ ನಟ, ನಿರ್ಮಾಪಕ ಮತ್ತು ಕಿರುತೆರೆ ನಿರ್ದೇಶಕ.
14. ಆರ್ಯವರ್ಧನ್ ಗುರೂಜಿ
ಆರ್ಯವರ್ಧನ್ ಗುರೂಜಿ ಕನ್ನಡ ಟೆಲಿವಿಷನ್ ಉದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡುವ ಗುರೂಜಿ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುತ್ತಾರೆ.
ಈ ಮೇಲಿನ ಎಲ್ಲ ಸ್ಪರ್ಧಿಗಳು ಸಂಭವನೀಯ ಸ್ಪರ್ಧಿಗಳಷ್ಟೇ. ಸಾಮಾಜಿಕ ಜಾಲತಾಣದಲ್ಲಿ ಈ ಹೆಸರುಗಳು ಹೆಚ್ಚಾಗಿ ಕೇಳಿಬರುತ್ತಿರುವುದರಿಂದ ಈ ಬಾರಿ ಬಿಗ್ಬಾಸ್ ಮನೆಯೊಳಗೆ ಇವರುಗಳು ಪ್ರವೇಶಿಸಬಹುದು ಎಂದು ಊಹಿಸಲಾಗಿದೆ. ಆದರೆ, ಮನೆಯೊಳಗೆ ಯಾರು ಪ್ರವೇಶಿಸಲಿದ್ದಾರೆ ಎಂಬುದು ಗೊತ್ತಾಗುವುದು ಶೋ ಪ್ರಾರಂಭವಾದಾಗ ಮಾತ್ರ. ಹೀಗಾಗಿ ಅಲ್ಲಿಯವರೆಗೆ ಕಾಯಲೇಬೇಕಿದೆ.