ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗಿದೆ, ಆದರೆ ಸಚಿವ ಸಂಪುಟ ವಿಭಜನೆ ಇನ್ನೂ ಆಗಿಲ್ಲ. ಬಿಜೆಪಿ ಮತ್ತು ಶಿಂಧೆ ಬಣದ ಎಷ್ಟು ಶಾಸಕರು ಸಚಿವರಾಗುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಮಧ್ಯೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರ ಪುತ್ರ ಅಮಿತ್ ಠಾಕ್ರೆಗೆ ಶಿಂಧೆ ಸರ್ಕಾರಕ್ಕೆ ಸೇರಿಸಿಕೊಳ್ಳಬಹುದು ಎಂಬ ಮಾಹಿತಿ ಹೊರಬಿದ್ದಿದೆ.
ಎಂಎನ್‌ಎಸ್ ಯುವ ನಾಯಕಅಮಿತ್ ಠಾಕ್ರೆಕೊಂಕಣ ಪ್ರವಾಸದಲ್ಲಿದ್ದಾರೆ. ಪ್ರವಾಸಕ್ಕೂ ಮುನ್ನವೇ ಅವರ ಸಂಪುಟ ಸೇರುವ ಚರ್ಚೆ ಆರಂಭವಾಗಿದೆ. ಅಮಿತ್ ಠಾಕ್ರೆ ಅವರ ಸಚಿವ ಸ್ಥಾನದ ಬಗ್ಗೆ ಎಂಎನ್‌ಎಸ್‌ನಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳಲ್ಲಿ ಮಹಾರಾಷ್ಟ್ರದ ರಾಜಕೀಯದಲ್ಲಿ ಹಲವು ಕುತೂಹಲಕಾರಿ ಬೆಳವಣಿಗೆಗಳು ನಡೆದಿವೆ. ಹೆಚ್ಚು ಶಾಸಕರಿದ್ದರೂ ಬಿಜೆಪಿ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಸ್ಥಾನ ನೀಡಿತ್ತು. ದೇವೇಂದ್ರ ಫಡ್ನವಿಸ್ ಅವರ ಸ್ಥಾನದಲ್ಲಿ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸುವ ಮೂಲಕ ಪಕ್ಷವು ಎಲ್ಲರಿಗೂ ಬಿಗ್ ಶಾಕ್ ನೀಡಿತ್ತು.
ರಾಜ್ ಠಾಕ್ರೆ ಹೇಳಿದ್ದೇನು?
ಇದೀಗ ಶಿಂಧೆ-ಫಡ್ನವೀಸ್ ಸರ್ಕಾರದ ಸಂಪುಟ ವಿಸ್ತರಣೆಯಲ್ಲಿ ಅಮಿತ್ ಠಾಕ್ರೆಗೆ ಅವಕಾಶ ಸಿಗಬಹುದು ಎಂಬ ಮಾಹಿತಿ ಹೊರ ಬಿದ್ದಿದೆ. ಆದರೆ, ಈ ಬಗ್ಗೆ ಮಾಹಿತಿ ಮಾತನಾಡಿರುವ ರಾಜ್ ಠಾಕ್ರೆ, ಅಂತಹದ್ದೇನೂ ಇಲ್ಲ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ರಾಜ್ ಠಾಕ್ರೆ ಅವರಿಗೆ ಕರೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸರ್ಕಾರ ರಚನೆಗೆ ಎಂಎನ್‌ಎಸ್ ಬಿಜೆಪಿಗೆ ಬೆಂಬಲ ನೀಡಿತು. ಹೀಗಾಗಿ ಬಿಜೆಪಿ ತನ್ನ ಕೋಟಾದಿಂದ ಎಂಎನ್‌ಎಸ್‌ಗೆ ಸಚಿವ ಸ್ಥಾನ ನೀಡಲಿದೆ ಎಂಬ ಚರ್ಚೆ ಆರಂಭವಾಗಿದೆ.
ಎಂಎನ್‌ಎಸ್‌ನ ಏಕೈಕ ಶಾಸಕ ರಾಜು ಪಾಟೀಲ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಇದೀಗ ರಾಜ್ ಠಾಕ್ರೆ ಪಕ್ಷಕ್ಕೆ ಬಿಜೆಪಿ ಹೊಸ ಆಫರ್ ಕೊಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ಆಫರ್ ಪ್ರಕಾರ, ಅಮಿತ್ ಠಾಕ್ರೆ ಶಿಂಧೆ-ಫಡ್ನವಿಸ್ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯಬಹುದು. ಆದರೆ, ಈ ಸುದ್ದಿಯನ್ನು ರಾಜ್ ಠಾಕ್ರೆ ತಳ್ಳಿ ಹಾಕಿದ್ದಾರೆ.