ಬೆಂಗಳೂರು: 545 ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿಯಿಂದ ಬಂಧನಕ್ಕೀಡಾಗಿರುವ ಹಿರಿಯ ಪೊಲೀಸ್ ಅಧಿಕಾರಿಗಳ ಮಂಪರು ಪರೀಕ್ಷೆ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಪಿಎಸ್‌ಐ ಅಕ್ರಮದಲ್ಲಿ ನೇಮಕಾತಿ ವಿಭಾಗದ ಎ.ಡಿ.ಜಿ.ಪಿ ಯಾಗಿದ್ದ ಅಮೃತ್ ಪೌಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಬಂಧನವಾಗಿದ್ದು, ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಹಗರಣದಲ್ಲಿ ಭಾಗಿಯಾಗಿರುವ ರಾಜಕಾರಣಿಗಳ ಬಗ್ಗೆ ಬಯಲಾಗಲಿದೆ. ಪ್ರಕರಣದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. “ಉಪ್ಪು ತಿಂದವರು ನೀರು ಕುಡಿಯಲಿ” ಹಾಗಾಗಿ ಹಿರಿಯ ಅಧಿಕಾರಿಗಳ ಮಂಪರು ಪರೀಕ್ಷೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಅಕ್ರಮದಲ್ಲಿ ಅನೇಕ ಸಚಿವರು, ಅವರ ಆಪ್ತರು ಶಾಮೀಲಾಗಿರುವ ಸಂದೇಹಗಳಿವೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳಬೇಕು ಎಂದರೆ ಪ್ರಮುಖ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಅಲ್ಲದೇ ಅಮೃತ್ ಪೌಲ್ ಬರೆದ ಡೈರಿಯ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟರ್ ನಲ್ಲಿ ಆಗ್ರಹಿಸಿದ್ದಾರೆ.