ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ನಗರ ಬಸ್ ನಿಲ್ದಾಣ (ಸಿಬಿಟಿ) ಕಾಮಗಾರಿಯನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಸೋಮವಾರ ಪರಿಶೀಲಿಸಿದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳಗಾವಿಯಲ್ಲಿ ಅರ್ಧಂಬರ್ಧ ಸ್ಮಾರ್ಟ್ ಎಂಬ ಶೀರ್ಷಿಕೆಯಡಿ ಉದಯವಾಣಿಯಲ್ಲಿ ವಿಶೇಷ ವರದಿ ಪ್ರಕಟವಾದ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಕಾಮಗಾರಿ ಪರಿಶೀಲಿಸಿದ್ದು ವಿಶೇಷವಾಗಿತ್ತು.
ಸಿಬಿಟಿ ಪಕ್ಕದ ಜಾಗಕ್ಕೆ ಸಂಬಂಧಿಸಿದ ವಿವಾದದಿಂದ ಎಂಟು ತಿಂಗಳು ಕಾಲ ಕಾಮಗಾರಿ ವಿಳಂಬಗೊಂಡಿದೆ. ಆದರೆ ಇದೀಗ ಜಾಗದ ವಿವಾದ ಬಗೆಹರಿದಿರುವುರಿಂದ ಕಾಮಗಾರಿ ಆರಂಭಗೊಂಡಿದೆ. ಕಾಮಗಾರಿಯನ್ನು ಮತ್ತಷ್ಟು ಚುರುಕುಗೊಳಿಸಿ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರವೀಣ ಬಾಗೇವಾಡಿ ಮಾತನಾಡಿ, ನಗರ ಬಸ್ ನಿಲ್ದಾಣದ ಕಾಮಗಾರಿ ಇದೀಗ ಭರದಿಂದ ಸಾಗಿದ್ದು, ಎರಡು ಅಂತಸ್ತು ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ. ಜಾಗದ ವಿವಾದದ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದ್ದು, ನಿಗದಿತ ಅವ ಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.