ಬೆಂಗಳೂರು: ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ನಾಳೆ ಬಹುತೇಕ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಈ ಸಂಬಂಧ ನವದೆಹಲಿಯಲ್ಲಿ ಗುರವಾರ ಬಿಜೆಪಿ ವರಿಷ್ಠರ ಮಹತ್ವದ ಸಮಾಲೋಚನಾ ಸಭೆ ನಡೆಯಲಿದೆ.
ಕರ್ನಾಟಕದ 4 ಸ್ಥಾನಗಳ ಪೈಕಿ 2 ಸ್ಥಾನಗಳನ್ನು ಬಿಜೆಪಿ ಸುಲಭವಾಗಿ ಗೆಲ್ಲಬಹುದಾಗಿದ್ದು, ಕಣಕ್ಕಿಳಿಯುವ ಇಬ್ಬರು ಅಭ್ಯರ್ಥಿಗಳ ಆಯ್ಕೆ ನಡೆಯಬೇಕಿದೆ. ಹಾಲಿ ಸದಸ್ಯೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಡಜನ್ ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯ ಬಿಜೆಪಿ ಕೋರ್ ಕಮಿಟಿ ವರಿಷ್ಠರಿಗೆ ರವಾನಿಸಿದೆ.
ಮತ್ತೋರ್ವ ಹಾಲಿ ಸದಸ್ಯ ಕೆ.ಸಿ.ರಾಮಮೂರ್ತಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಸುರಾನಾ, ಮಾಜಿ ಶಾಸಕ ಲೆಹರ್‌ಸಿಂಗ್, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಉದ್ಯಮಿ ಪ್ರಕಾಶ್ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಆಕಾಂಕ್ಷಿತರ ಪಟ್ಟಿಯಲ್ಲಿದ್ದಾರೆ.
3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತಾಗಿಯೂ ರಾಷ್ಟ್ರೀಯ ನಾಯಕರು ಸಮಾಲೋಚನೆ ನಡೆಸಲಿದ್ದಾರೆ. 3ನೇ ಅಭ್ಯರ್ಥಿಯ ಆಯ್ಕೆಗೆ 15 ಶಾಸಕರ ಕೊರತೆಯಿದ್ದು, ಅದು ಕೈಗೂಡುವುದಾದರೆ ಮಾತ್ರ ಪಕ್ಷವು ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಇಲ್ಲದಿದ್ದರೆ ಪ್ರತಿಪಕ್ಷಗಳ ಹೆಚ್ಚುವರಿ ಮತ ಕೀಳಬಲ್ಲ ತಟಸ್ಥ ಅಭ್ಯರ್ಥಿಯೊಬ್ಬರನ್ನು ಮುಂದೆ ಬಿಟ್ಟು ಗೆಲ್ಲಿಸುವ ತಂತ್ರಗಾರಿಯೂ ಬಿಜೆಪಿಯದ್ದಾಗಿದೆ.
Laxmi News 24×7