ಬೆಂಗಳೂರು: ಬಿಜೆಪಿ ಹಾಗೂ ಕೆಲವು ಸಂಘಟನೆಗಳ ವೈಯಕ್ತಿಕ ನಂಬಿಕೆಗಳನ್ನು ನಾವು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಆದರೆ ಅವು ಅದನ್ನು ಬೇರೆಯವರ ಮೇಲೆ ಹೇರಬಾರದು. ಸಾರ್ವಜನಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡಬಾರದು. ಅದು ತಪ್ಪು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.
ಶಿವಕುಮಾರ್ ಅವರು ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿ, ಮಂಗಳೂರಿನ ಮಳಲಿ ಮಸೀದಿ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ನಾಯಕರು ಹಾಗೂ ಬಿಜೆಪಿ ಶಾಸಕರು ತಾಂಬೂಲ ಪ್ರಶ್ನೆ ಕೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ‘ಬಿಜೆಪಿ ಸರ್ಕಾರ ಈ ರಾಜ್ಯವನ್ನು ಕೊಲ್ಲುತ್ತಿದೆ. ಬಿಜೆಪಿಯವರು ತಮ್ಮ ನಂಬಿಕೆ, ಸ್ವಂತ ವಿಚಾರದಲ್ಲಿ ಏನಾದರೂ ಮಾಡಿಕೊಳ್ಳಲಿ. ಅವರ ವೈಯಕ್ತಿಕ ನಂಬಿಕೆ, ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ಇದರಿಂದ ರಾಜ್ಯಕ್ಕೆ ಎಷ್ಟು ಹಾನಿಯಾಗುತ್ತದೆ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಬಿಜೆಪಿಯವರು ಭಾವನಾತ್ಮಕ ವಿಚಾರಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು. ಸರ್ಕಾರದಲ್ಲಿ ಅಲ್ಪಸಂಖ್ಯಾತರ ಸಚಿವಾಲಯ, ಹಿಂದೂಗಳಿಗಾಗಿ ಮುಜರಾಯಿ ಇಲಾಖೆ ಇದೆ. ಸರ್ಕಾರಿ ಅಧಿಕಾರಿಗಳು ಇದ್ದಾರೆ. ಹೀಗಾಗಿ ಸರಕಾರದ ವಿಚಾರದಲ್ಲಿ ಸಂಘಟನೆಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಸರ್ಕಾರ ಕೂಡಲೇ ಇವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದರು.