Breaking News

ಕಾಡುತ್ತಿದೆ ಕಲ್ಲಿದ್ದಲು ಕೊರತೆ, ವಿದ್ಯುತ್ ಅಭಾವ ಭೀತಿ; 81 ಸ್ಥಾವರಗಳಲ್ಲಿ ನಿಶ್ಚಿತ ದಾಸ್ತಾನಿಲ್ಲ

Spread the love

ನವದೆಹಲಿ: ದೇಶಾದ್ಯಂತ ಬೇಸಿಗೆ ತಾಪ ಏರುತ್ತಿರುವ ಬೆನ್ನಲ್ಲೇ ವಿದ್ಯುತ್ ಬೇಡಿಕೆಯೂ ಹೆಚ್ಚಾಗಿದೆ. ಈ ನಡುವೆ, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಕೊರತೆ ಗೋಚರಿಸಿದೆ. ಹೀಗಾಗಿ ಕೆಲವು ರಾಜ್ಯಗಳಲ್ಲಿ ಪವರ್ ಕಟ್ ಶುರುವಾಗಿದೆ.

ಸೆಂಟ್ರಲ್ ಇಲೆಕ್ಟ್ರಿಸಿಟಿ ಅಥಾರಿಟಿ ಆಫ್ ಇಂಡಿಯಾದ ಇತ್ತೀಚಿನ ಕಲ್ಲಿದ್ದಲು ದೈನಿಕ ವರದಿ ಪ್ರಕಾರ, ದೇಶದ 150 ಉಷ್ಣ ವಿದ್ಯುತ್ ಸ್ಥಾವರಗಳ ಪೈಕಿ ಸ್ಥಳೀಯ ಕಲ್ಲಿದ್ದಲು ಬಳಸುವ 81 ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಗಂಭೀರ ಸ್ಥಿತಿಯಲ್ಲಿದೆ. ಇದೇ ರೀತಿ, 54 ಖಾಸಗಿ ಉಷ್ಣ ವಿದ್ಯುತ್ ಸ್ಥಾವರಗಳ ಪೈಕಿ 28ರಲ್ಲಿ ಪರಿಸ್ಥಿತಿ ಹದಗೆಟ್ಟಿದೆ.

ಎಲ್ಲೆಲ್ಲಿ ಎಷ್ಟೆಷ್ಟು ದಾಸ್ತಾನು?: ಉತ್ತರ ಪ್ರದೇಶದಲ್ಲಿರುವ ವಿದ್ಯುತ್ ಸ್ಥಾವರದಲ್ಲಿ ಕೇವಲ ಏಳು ದಿನಕ್ಕೆ, ಹರಿಯಾಣದಲ್ಲಿ 8 ದಿನಕ್ಕೆ, ರಾಜಸ್ಥಾನದಲ್ಲಿ 17 ದಿನಗಳಿಗೆ ಆಗುವಷ್ಟು ಮಾತ್ರವೇ ಕಲ್ಲಿದ್ದಲು ದಾಸ್ತಾನು ಇದೆ. ನಿಯಮ ಪ್ರಕಾರ ಪ್ರತಿ ವಿದ್ಯುತ್ ಸ್ಥಾವರದಲ್ಲಿ 26 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ದಾಸ್ತಾನು ಇರಿಸಿಕೊಳ್ಳಬೇಕು. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಜಾರ್ಖಂಡ್, ಛತ್ತೀಸ್​ಗಢಗಳಲ್ಲಿ ಕೂಡ ಪರಿಸ್ಥಿತಿ ಚೆನ್ನಾಗಿಲ್ಲ.

ವಿದ್ಯುತ್ ಬೇಡಿಕೆ ಪ್ರಮಾಣ: ವಿದ್ಯುತ್ ಬೇಡಿಕೆಯು ಏಪ್ರಿಲ್ 19ಕ್ಕೆ 1,88,014 ಮೆಗಾವಾಟ್ ತಲುಪಿದೆ. ಕೊರತೆ ಪ್ರಮಾಣ ಗರಿಷ್ಠ 4,469 ಮೆಗಾವಾಟ್​ನಲ್ಲಿದೆ. ಗರಿಷ್ಠ ಬೇಡಿಕೆ 2021ರ ಜುಲೈನಲ್ಲಿ ದಾಖಲಾಗಿದ್ದು, 2,0,570 ಮೆಗಾ ವಾಟ್ ವಿದ್ಯುತ್ ಬೇಡಿಕೆ ಅಂದು ಇತ್ತು.

ಆತಂಕ ಅನಗತ್ಯ: ಕಲ್ಲಿದ್ದಲು ಕೊರತೆ ಕುರಿತ ಸುದ್ದಿ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಲ್ಲಿದ್ದಲು ಸಚಿವಾಲಯದ ಮೂಲಗಳು, ದೇಶದಲ್ಲಿ ಕಲ್ಲಿದ್ದಲು ದಾಸ್ತಾನಿಗೆ ಕೊರತೆ ಆಗಿಲ್ಲ. ಕಲ್ಲಿದ್ದಲು ಉತ್ಪಾದನೆಯನ್ನು ಏಪ್ರಿಲ್​ನಲ್ಲಿ ಶೇಕಡ 20-22ರಷ್ಟು ಏರಿಕೆ ಮಾಡಲಾಗಿದೆ. 30ಕ್ಕೂ ಹೆಚ್ಚು ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ದಾಸ್ತಾನಿದೆ. ಆತಂಕಕ್ಕೆ ಒಳಗಾಗುವ ಅಗತ್ಯವೇ ಇಲ್ಲ. ದೇಶದಲ್ಲಿ 22 ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನಿದ್ದು, ನಿತ್ಯವೂ 2.1 ಮೆಟ್ರಿಕ್ ಟನ್ ಕಲ್ಲಿದ್ದಲು ಸ್ಥಾವರಗಳನ್ನು ತಲುಪುತ್ತಿವೆ. ಎಲ್ಲ ವಿದ್ಯುತ್ ಸ್ಥಾವರಗಳಲ್ಲಿ 10ಕ್ಕೂ ಹೆಚ್ಚು ದಿನಗಳಿಗಾಗುವಷ್ಟು ದಾಸ್ತಾನಿದೆ. ದೇಶದಲ್ಲಿ 30ಕ್ಕೂ ಹೆಚ್ಚು ದಿನಗಳಿಗಾಗುವಷ್ಟು ಕಲ್ಲಿದ್ದಲು ದಾಸ್ತಾನಿದೆ ಎಂದು ತಿಳಿಸಿವೆ.

ಕಲ್ಲಿದ್ದಲು ಕೊರತೆ ನೀಗಿಸಲು ಕ್ರಮ: ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದ್ದರಿಂದ ಸಹಜವೇ ಕಲ್ಲಿದ್ದಲು ಬೇಡಿಕೆ ಹೆಚ್ಚಿದೆ. ಪೂರೈಕೆಯಲ್ಲಿ ತಡವಾಗುತ್ತಿದೆ ಹೊರತು, ಕೊರತೆ ಇಲ್ಲ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಶೇ.43 ಕಲ್ಲಿದ್ದಲು ಉತ್ಪಾದನೆ ಹೆಚ್ಚಾಗಿದ್ದು, ಸುಮಾರು 21 ಮಿಲಿಯನ್ ಟನ್ ದೇಶದಲ್ಲಿ ದಾಸ್ತಾನಿದೆ. ಪ್ರತಿದಿನ 3.10 ಬಿಲಿಯನ್ ಯೂನಿಟ್ ವಿದ್ಯುತ್ ಬೇಡಿಕೆ ಇದ್ದದ್ದು ಈಗ 3.40 ಬಿಲಿಯನ್ ಯೂನಿಟ್​ಗೆ ಏರಿಕೆಯಾಗಿದೆ. ಕೋಲ್ ಇಂಡಿಯಾದಲ್ಲಿ 72 ಮಿಲಿಯನ್ ಟನ್, ತೆಲಂಗಾಣದ ಸಿಂಗ್ರೇನಿಯಾ, ಕ್ಯಾಪ್ಟಲ್, ವಾಸರಿ ಹೀಗೆ ಹಲವು ಗಣಿಗಳಲ್ಲಿ ಸಾಕಷ್ಟು ಕಲ್ಲಿದ್ದಲು ಸಂಗ್ರಹವಿದೆ. ರಾಜ್ಯಕ್ಕೆ ದೂರದ ಪ್ರದೇಶದಿಂದ ಕಲ್ಲಿದ್ದಲು ಬರುವುದರಿಂದ ಸಾಗಣೆ ತಡವಾಗುತ್ತಿದೆ. ಬೇಡಿಕೆಯಷ್ಟು ಸರಬರಾಜು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಡಿಮೆ ಆಮದು ಸಂಕಷ್ಟ: ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಕಾಡುವುದಕ್ಕೆ 2021-22ರಲ್ಲಿ ಆಮದು ಪ್ರಮಾಣ ಕಡಿಮೆ ಮಾಡಿರುವುದೇ ಮುಖ್ಯ ಕಾರಣ. 2022ನೇ ಹಣಕಾಸು ವರ್ಷದಲ್ಲಿ ಭಾರತ 25 ದಶಲಕ್ಷ ಟನ್ ಕಲ್ಲಿದ್ದಲನ್ನು ಮಾತ್ರ ಆಮದು ಮಾಡಿಕೊಂಡಿದೆ. ಹಿಂದಿನ ವರ್ಷದ ಆಮದು ಪ್ರಮಾಣಕ್ಕೆ ಹೋಲಿಸಿದರೆ ಇದು ಶೇಕಡ 50 ಮಾತ್ರ ಎಂದು ಅಧಿಕಾರಿಗಳು ಹೇಳಿದ್ದಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ