ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಂಬೈ ಇಂಡಿಯನ್ಸ್ ತಂಡದ ಪಾಲಿಗೆ ಅತಿ ಕೆಟ್ಟ ಆವೃತ್ತಿಯಾಗಿ ಪರಿಣಮಿಸಿದೆ. ಹೌದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲನೇ ಪಂದ್ಯವನ್ನಾಡಿ ಸೋಲುವುದರ ಮೂಲಕ ತನ್ನ ಪಯಣವನ್ನು ಆರಂಭಿಸಿದ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 7 ಪಂದ್ಯಗಳನ್ನಾಡಿದ್ದು, ಎಲ್ಲಾ ಪಂದ್ಯಗಳಲ್ಲಿಯೂ ಸೋತು ಅಂಕಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ.
ಈ ಹಿಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯೊಂದರಲ್ಲಿ ಮೊದಲ 5 ಪಂದ್ಯಗಳಲ್ಲಿ ಸತತವಾಗಿ ಸೋತು ನಂತರದ ಪಂದ್ಯಗಳಲ್ಲಿ ಜಯಗಳಿಸಿ ಯಶಸ್ವಿಯಾಗಿ ಪ್ಲೇಆಫ್ ತಲುಪಿ ಟ್ರೋಫಿ ಎತ್ತಿ ಹಿಡಿದಿರುವ ಅನುಭವವನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ಇದೇ ಮೊದಲ ಬಾರಿಗೆ ಮೊದಲ 7 ಪಂದ್ಯಗಳನ್ನು ಸೋತ ಕೆಟ್ಟ ಅನುಭವವನ್ನು ಪಡೆದುಕೊಂಡಿದೆ. ಐಪಿಎಲ್ ಇತಿಹಾಸದಲ್ಲಿಯೇ ಮೊದಲ 7 ಪಂದ್ಯಗಳಲ್ಲಿ ಸತತವಾಗಿ ಸೋತ ತಂಡ ಎಂಬ ಕೆಟ್ಟ ದಾಖಲೆಯನ್ನು ಕೂಡ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಬರೆದಿದೆ.
ಮೊದಲಿಗೆ 6 ಪಂದ್ಯಗಳಲ್ಲಿ ಸೋತಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉಳಿದ ಪಂದ್ಯಗಳನ್ನು ಕಡ್ಡಾಯವಾಗಿ ಗೆದ್ದರೆ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ತನ್ನ ಏಳನೇ ಪಂದ್ಯದಲ್ಲಿಯೂ ಕೂಡ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ಸೆಮಿಫೈನಲ್ ಪ್ರವೇಶಿಸುವುದು ಮತ್ತಷ್ಟು ಅನುಮಾನ ಮೂಡಿಸಿದೆ. ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ರೋಚಕ ಹಣಾಹಣಿಯಲ್ಲಿ ಸೋಲುಂಡಿರುವ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪ್ರವೇಶಿಸಲು ಇರುವ ಮಾರ್ಗ ಯಾವುದು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ ಓದಿ.
ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆದ್ದರೂ ಅನುಮಾನ!
ಸದ್ಯ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿ ಎಲ್ಲಾ ಪಂದ್ಯಗಳಲ್ಲಿಯೂ ಸೋತಿರುವ ಮುಂಬೈ ಇಂಡಿಯನ್ಸ್ ಉಳಿದಿರುವ 7 ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳನ್ನು ಸಹ ಕಡ್ಡಾಯವಾಗಿ ಗೆಲ್ಲಲೇಬೇಕಾಗಿದೆ. -0.892 ನೆಟ್ ರನ್ ರೇಟ್ ಹೊಂದಿರುವ ಮುಂಬೈ ಇಂಡಿಯನ್ಸ್ ಉಳಿದಿರುವ ಎಲ್ಲಾ 7 ಪಂದ್ಯಗಳಲ್ಲಿಯೂ ಜಯ ಸಾಧಿಸಿ ಮೈನಸ್ ಇರುವ ನೆಟ್ ರನ್ ರೇಟ್ ಅನ್ನು ಪ್ಲಸ್ ಮಾಡಿಕೊಳ್ಳಲೇಬೇಕಿದೆ. ಉಳಿದಿರುವ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದು 14 ಅಂಕಗಳನ್ನು ಪಡೆದುಕೊಂಡರೂ ಸಹ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪ್ರವೇಶಿಸಿಬಿಡುತ್ತದೆ ಎನ್ನಲಾಗುವುದಿಲ್ಲ. ಈ ಬಾರಿ ಹತ್ತು ತಂಡಗಳು ಕಣಕ್ಕಿಳಿದಿರುವುದರಿಂದ ಪ್ಲೇ ಆಫ್ ಪ್ರವೇಶಿಸಲು ಯತ್ನಿಸುವ ಇತರೆ ತಂಡಗಳು ಕೂಡ 14 ಅಂಕಗಳನ್ನು ಪಡೆದುಕೊಂಡು, ಮುಂಬೈ ಇಂಡಿಯನ್ಸ್ ಹೆಚ್ಚಿನ ನೆಟ್ ರನ್ ರೇಟ್ ಹೊಂದಿದ್ದರೆ ಮಾತ್ರ ಪ್ಲೇ ಆಫ್ ಪ್ರವೇಶಿಸಬಹುದಾಗಿದೆ. ಒಂದುವೇಳೆ ಇತರೆ ತಂಡಗಳು ಮುಂಬೈ ಇಂಡಿಯನ್ಸ್ ತಂಡಕ್ಕಿಂತ ಹೆಚ್ಚಿನ ಗೆಲುವನ್ನು ಪಡೆದುಕೊಂಡರೆ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪ್ರವೇಶಿಸದೇ ಟೂರ್ನಿಯಿಂದ ಹೊರ ಬೀಳಲಿದೆ.