ಬೆಂಗಳೂರು: ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲು ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ ಒಂದು ವಾರ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಏ.24ರಂದು ವಿಶೇಷ ಗ್ರಾಮ ಸಭೆ ನಡೆಯಲಿದೆ.
ಪ್ರತಿ ವರ್ಷ ಏಪ್ರಿಲ್ 24ರಂದು ರಾಷ್ಟ್ರವ್ಯಾಪಿ “ಪಂಚಾಯತ್‌ರಾಜ್ ದಿವಸ್’ ಆಚರಿಸಲಾಗುತ್ತದೆ.
ಈ ದಿನ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮ ಹಾಗೂ ಗ್ರಾಮ ಸಭೆ ನಡೆಸಲಾಗುತ್ತದೆ. ಅದರಂತೆ, ಈ ಬಾರಿಯ ಪಂಚಾಯತ್‌ರಾಜ್ ದಿವಸ್ ಅಂಗವಾಗಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲು ವಿಶೇಷ ಅಭಿಯಾನ ನಡೆಸಲಾಗುತ್ತಿದೆ.
ಪಂಚಾಯತ್‌ರಾಜ್ ದಿವಸ್ ಅಂಗವಾಗಿ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲು ಏ.24ರಿಂದ ಮೇ 1ರವರೆಗೆ ಅಭಿಯಾನ ಹಮ್ಮಿಕೊಂಡು, ಅಭಿಯಾನ ಮೊದಲ ದಿನವಾದ ಏ.24ರಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಗ್ರಾಮ ಸಭೆ ನಡೆಸುವಂತೆ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಸೂಚನೆ ನೀಡಿದೆ. ಅದರಂತೆ, ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸುತ್ತೋಲೆ ಹೊರಡಿಸಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯದೆ ಇರುವ ಎಲ್ಲಾ ಅರ್ಹ ರೈತರಿಗೆ ಕ್ರೆಡಿಟ್ ಕಾರ್ಡ್ ಲಭ್ಯವಾಗುವಂತೆ ಜಿಲ್ಲಾ ಪಂಚಾಯಿತಿ ಸಿಇಒ, ಬ್ಯಾಂಕ್ ಅಧಿಕಾರಿಗಳು, ನಬಾರ್ಡ್ ಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಮತ್ತು ಅಭಿಯಾನ ಯಶಸ್ವಿಗೊಳಿಸಲು ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವಂತೆ ಮತ್ತು ಗ್ರಾ.ಪಂ. ವ್ಯಾಪ್ತಿಯ ಬ್ಯಾಂಕುಗಳು, ರೈತರು ಮತ್ತು ಸಂಬಂಧಿಸಿದ ಅಧಿಕಾರಿಗಳನ್ನು ಸೇರಿಸಿಕೊಂಡು ಈ ಅಭಿಯಾನ ಹಮ್ಮಿಕೊಳ್ಳುವಂತೆ ಇಲಾಖೆ ಸೂಚನೆ ನೀಡಿದೆ.
ರೈತರಿಗೆ ಅರಿವು ಮೂಡಿಸಬೇಕು:
ಪಂಚಾಯತ್‌ರಾಜ್ ದಿವಸ್ ಅಂಗವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸುವ ಬಗ್ಗೆ ಕೇಂದ್ರ ಕೃಷಿ ಸಚಿವಾಲಯ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಗ್ರಾ.ಪಂ.ಗಳು ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲು ಏ.24ರಿಂದ ಮೇ 1ರವರೆಗೆ ಆಂದೋಲನ ಹಮ್ಮಿಕೊಂಡು, ಏ.24ರ ವಿಶೇಷ ಗ್ರಾಮ ಸಭೆ ನಡೆಸಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ದೊರೆಯುವ ಸೌಲಭ್ಯಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ಅದರಂತೆ ರಾಜ್ಯದ ಎಲ್ಲಾ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.