ಹುಬ್ಬಳ್ಳಿ, ಏ.21- ಶನಿವಾರ ರಾತ್ರಿ ನಡೆದ ಹುಬ್ಬಳ್ಳಿ ಗಲಭೆಯಲ್ಲಿ ಕಾಣಿಸಿಕೊಂಡಿದ್ದ ಮೌಲ್ವಿಯ ಅಸಲಿ ರೂಪ ಬಯಲಾಗಿದೆ. ಆತ ಮೌಲ್ವಿಯೇ ಅಲ್ಲ. ಮೌಲ್ವಿಯ ವೇಷ ಧರಿಸಿ ಬಂದಿದ್ದ ಲಾರಿಚಾಲಕ ಎಂಬುದು ಗೊತ್ತಾಗಿದೆ.
ಹುಬ್ಬಳ್ಳಿ ಗಲಾಟೆಯಲ್ಲಿ ಮೌಲ್ವಿ ವೇಷದಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿ ಅಸಲಿಗೆ ಮೌಲ್ವಿಯೇ ಅಲ್ಲ. ಆತ ಲಾರಿ ಚಾಲಕ ವಾಸಿಂ. ಈ ಹಿಂದೆ ಲಾರಿ ಚಾಲಕನಾಗಿದ್ದ ಈತ ಮೌಲ್ವಿಯಂತೆ ವೇಷ ಹಾಕಿಕೊಂಡು ಓಡಾಡುತ್ತಿದ್ದ. ಈ ವೇಷ ಹಾಕಿ ತನ್ನದೇ ಆದ ಅಭಿಮಾನಿಗಳನ್ನು ಬೆಳೆಸಿಕೊಂಡಿದ್ದ ಎಂಬ ರಹಸ್ಯ ಬಯಲಾಗಿದೆ.
ಹುಬ್ಬಳ್ಳಿಯಲ್ಲಿನ ಗಲಭೆಯ ಹಿಂದೆ ಮೌಲ್ವಿಯೊಬ್ಬರ ಕೈವಾಡ ಇರುವ ಶಂಕೆ ವ್ಯಕ್ತವಾಗಿತ್ತು. ಗಲಾಟೆಗೂ ಮುನ್ನ ಮೌಲ್ವಿಯೊಬ್ಬರು ಕಮಿಷನರ್ ಅವರ ಇನ್ನೋವಾ ಕಾರಿನ ಮೇಲೆ ಹತ್ತಿ ಭಾಷಣ ಮಾಡಿರುವ ವೀಡಿಯೋ ವೈರಲ್ ಆಗಿತ್ತು. ಅಲ್ಲದೆ, ಇದು ಗಲಭೆಗೆ ಪ್ರಚೋದನೆ ನೀಡಿರುವ ಭಾಷಣ ಎಂದು ಹೇಳಲಾಗಿತ್ತು.