Breaking News

ಗುತ್ತಿಗೆ ಪಡೆದಿದ್ದವರು ಯಾರು ಎನ್ನುವುದು ನಮಗೆ ಗೊತ್ತಿಲ್ಲ’, ಕೆಲಸ ಆಗಿದೆ;, ಸಂತೋಷ್ ಪಾಟೀಲ ಸ್ಟೋರಿ

Spread the love

ಬೆಳಗಾವಿ: ತಾಲ್ಲೂಕಿನ ಹಿಂಡಲಗಾ ಗ್ರಾಮದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕೆಲಸಗಳು ನಡೆದಿರುವುದು ನಿಜ. ‘ಅವುಗಳನ್ನು ಮಾಡಿಸಿದ್ದು ಗುತ್ತಿಗೆದಾರ ದಿವಂಗತ ಸಂತೋಷ್ ಪಾಟೀಲ’ ಎಂದು ಹಲವರು ಹೇಳಿದರೆ, ‘ಕಾಮಗಾರಿಗಳು ಆಗಿವೆ.

ಆದರೆ ಗುತ್ತಿಗೆ ಪಡೆದಿದ್ದವರು ಯಾರು ಎನ್ನುವುದು ನಮಗೆ ಗೊತ್ತಿಲ್ಲ’ ಎಂದು ಇನ್ನು ಕೆಲವರು ಪ್ರತಿಕ್ರಿಯಿಸಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲಿ ‘ಪ್ರಜಾವಾಣಿ’ಯು ಗ್ರಾಮದಲ್ಲಿ ಭಾನುವಾರ ಸಂಚರಿಸಿ ‘ರಿಯಾಲಿಟಿ ಚೆಕ್‌’ ನಡೆಸಿತು. ಆಗ ಗ್ರಾಮಸ್ಥರಿಂದ ಭಿನ್ನ ಅಭಿಪ್ರಾಯಗಳು ಕೇಳಿಬಂದವು. ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆಗೂ ಕಾರಣವಾಯಿತು.

‘ಒಟ್ಟು ₹4 ಕೋಟಿ ವೆಚ್ಚದಲ್ಲಿ 108 ಕಾಮಗಾರಿ ನಡೆಸಿದ್ದೇನೆ. ಸರಾಸರಿ ₹ 1.50 ಲಕ್ಷದಿಂದ ₹4 ಲಕ್ಷ ಮೊತ್ತದವು’ ಎಂದು ಸಂತೋಷ್ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಊರಿನಲ್ಲಿ ಸಂಚರಿಸಿದಾಗ, ಅಭಿವೃದ್ಧಿ ಕಾಮಗಾರಿ ನಡೆದಿರುವುದು ಕಂಡುಬಂತು.

ಒಂದೂ ಫಲಕವಿಲ್ಲ: ಆ ಗ್ರಾಮದಲ್ಲಿ, ನೂರು ವರ್ಷದ ಬಳಿಕ 2020ರಲ್ಲಿ ಮಹಾಲಕ್ಷ್ಮಿದೇವಿ ಜಾತ್ರೆ ಬಂದಿತ್ತು. ಕೋವಿಡ್‌ನಿಂದಾಗಿ ಮುಂದೂಡಿದ್ದು, 2021ರ ಮಾರ್ಚ್‌ನಲ್ಲಿ ಜರುಗಿತ್ತು. ಅದ‌ಕ್ಕೂ ಹಿಂದೆ ಕಾಂಕ್ರೀಟ್ ರಸ್ತೆ, ಚರಂಡಿ, ಪೇವರ್ಸ್‌ ಜೋಡಣೆ ಕೆಲಸಗಳಾಗಿವೆ ಎಂದು ಗ್ರಾಮಸ್ಥರು ತಿಳಿಸಿದರು.

ಸಾಮಾನ್ಯವಾಗಿ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಅನು ದಾನದ ಬಳಕೆ, ಗುತ್ತಿಗೆದಾರರ ಮಾಹಿತಿ ಸೇರಿದಂತೆ ಕಾಮಗಾರಿಯ ವಿವರಗಳು ಹಾಗೂ ಸ್ಥಳೀಯ ಶಾಸಕರು ಮೊದಲಾದ ಜನಪ್ರತಿನಿಧಿಗಳ ಭಾವಚಿತ್ರಗಳಿರುವ ಫಲಕಗಳನ್ನು ಹಾಕಲಾಗುತ್ತದೆ. ಆದರೆ, ಹಿಂಡಲಗಾದಲ್ಲಿ ಅಂತಹ ಫಲಕಗಳು ಕಂಡುಬರಲಿಲ್ಲ. ಕೆಲವೆಡೆ ರಸ್ತೆಗಳು ಆಗಲೇ ಹಾಳಾಗಿವೆ. ಚರಂಡಿ ಕಾಮಗಾರಿಗಳು ಮುಗಿದಿಲ್ಲ.

ವೇಗವಾಗಿ ಕಾಮಗಾರಿ…: ‘ಸಂತೋಷ್ ಅವರು ಕಾಮಗಾರಿಗಳನ್ನು ನಡೆಸುತ್ತಿದ್ದುದ್ದನ್ನು ಗಮನಿಸಿದ್ದೇವೆ. ಇವೆಲ್ಲವೂ ಅವರೇ ಮಾಡಿಸಿದ ರಸ್ತೆಗಳು. ಅವರು ಅನುಮತಿ ಪಡೆದಿದ್ದರೋ, ಇಲ್ಲವೋ ನಮಗೆ ಗೊತ್ತಿಲ್ಲ’ ಎಂದು ಲಿಂಗರಾಜ ಕಾಲೊನಿ, ಸಿದ್ದಾರ್ಥನಗರ, ಲಕ್ಷ್ಮಿ ನಗರ, ಕಲ್ಮೇಶ್ವರ ನಗರ ಮತ್ತು ಗ್ರಾಮ ಪಂಚಾಯಿತಿ ಸುತ್ತಮುತ್ತಲಿನ ನಿವಾಸಿಗಳು ಪ್ರತಿಕ್ರಿಯಿಸಿದರು.

‘ಮಹಾಲಕ್ಷ್ಮಿ ದೇವಸ್ಥಾನ ಸುತ್ತಲೂ, ದೇವಿ ಮೂರ್ತಿ ಪ್ರತಿಷ್ಠಾಪನೆ ವೇದಿಕೆ ಎದುರು ಪೇವರ್ಸ್‌ ಅಳವಡಿಕೆಯಾಗಿದೆ. ಅದನ್ನು ವ್ಯಕ್ತಿ ಯೊಬ್ಬರು ಮಾಡಿಸುತ್ತಿದ್ದರು. ಅವರು ಸಂತೋಷ್ ಎನ್ನುವುದು ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ಪತ್ರಿಕೆ, ಟಿವಿಗಳಲ್ಲಿ ಬಂದ ಫೋಟೊ ನೋಡಿದಾಗ ತಿಳಿಯಿತು’ ಎಂದು ಸಮೀಪದ ಕಿರಾಣಿ ಅಂಗಡಿಯೊಂದರ ಮಾಲೀಕರು ತಿಳಿಸಿದರು.

12 ಮಂದಿಗೆ ಉಪಗುತ್ತಿಗೆ…: ಗ್ರಾಮದಲ್ಲಿ ಕೆಲಸ ನಡೆದಿರುವುದನ್ನು ಬಿಜೆಪಿ ಮುಖಂಡರು ಹೇಳುತ್ತಾರೆ. ಆದರೆ, ಅದಕ್ಕೆ ಸಂತೋಷ್ ಕಾರಣವಲ್ಲ ಎನ್ನುವುದು ಅವರ ವಾದ. ‘ಈ ಕಾಮಗಾರಿಗಳಿಗೆ ಸಂತೋಷ್ ಪಾಟೀಲ ಹಣ ಹಾಕಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಪತ್ರ ಪಡೆದು, ಕಾರ್ಯಾದೇಶ ಇದೆ ಎಂದು ಸುಳ್ಳು ಹೇಳಿ 12 ಮಂದಿಗೆ ಉಪಗುತ್ತಿಗೆ ಕೊಟ್ಟು ಕೆಲಸ ಮಾಡಿಸಿದ್ದಾರೆ. ಅವರ ಮೇಲಿನ ನಂಬಿಕೆಯಿಂದ ಗುತ್ತಿಗೆದಾರರು ಮುಂದುವರಿದಿದ್ದಾರೆ’ ಎಂದು ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಧನಂಜಯ ಜಾಧವ್ ಅವರು ಪ್ರತಿಕ್ರಿಯಿಸಿದರು.

ಉಪಗುತ್ತಿಗೆ ಕೊಟ್ಟಿದ್ದು ಯಾರಿಗೆ ಎನ್ನುವ ಖಚಿತ ಮಾಹಿತಿ ಇಲ್ಲ. ಅವರಲ್ಲಿ ಯಾರೊಬ್ಬರೂ, ತಮಗೆ ಹಣ ಬಂದಿಲ್ಲವೆಂದು ಮಾಧ್ಯಮದ ಮುಂದೆ ಬಂದಿಲ್ಲ. ಈ ಕುರಿತ ಪ್ರತಿಕ್ರಿಯೆಗೆ ಪಿಡಿಒ, ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್‌ ಲಭ್ಯರಾಗಲಿಲ್ಲ.

—–

ನಾನೂ ಪತ್ರ ಕೊಟ್ಟಿದ್ದೆ

2021ರಲ್ಲಿ ಜಾತ್ರೆ ಇತ್ತು. ಅದಕ್ಕೆ ತಿಂಗಳು ಮುಂಚೆ ಸಂತೋಷ್ ಕಾಮಗಾರಿಗಳನ್ನು ಮಾಡಿಸಿದ್ದಾರೆ. ಕಾಮಗಾರಿ ನಡೆಸುವಂತೆ ಕೆ.ಎಸ್.ಈಶ್ವರಪ್ಪ ಅವರು ಸಂತೋಷ್‌ಗೆ ಮೌಖಿಕವಾಗಿ ನಿರ್ದೇಶನ ನೀಡಿದ್ದರು. ಆಮೇಲೆ ಸರಿಮಾಡೋಣ ಎಂದೂ ಹೇಳಿದ್ದರು. ನಾನೂ ಪತ್ರ ಕೊಟ್ಟಿದ್ದೆ

ನಾಗೇಶ ಮನ್ನೋಳಕರ, ಅಧ್ಯಕ್ಷ, ಹಿಂಡಲಗಾ ಗ್ರಾಮ ಪಂಚಾಯಿತಿ

ಕೆಲಸ ನಡೆದಿವೆ, ಗುಣಮಟ್ಟವಿಲ್ಲ

ಸಂತೋಷ್ ಕಾಮಗಾರಿ ಮಾಡಿಸಿದ್ದಾರೆ. ನಮ್ಮ ಮನೆ ಎದುರು ರಸ್ತೆ ನಿರ್ಮಿಸಿದ್ದಾರೆ. ಅದು ಗುಣಮಟ್ಟದಿಂದ ಕೂಡಿಲ್ಲ. ಉಪ ಗುತ್ತಿಗೆ ನೀಡಿದ್ದರು ಎಂಬ ಮಾಹಿತಿಯೂ ಇದೆ. ಗ್ರಾಮ ಪಂಚಾಯಿತಿ ಸಭೆಯಲ್ಲಿ ಚರ್ಚೆಯಾಗಿಲ್ಲ. ಠರಾವು ಕೂಡ ಆಗಿರಲಿಲ್ಲ

ಡಿ.ಬಿ. ಪಾಟೀಲ, ಸದಸ್ಯ, ಹಿಂಡಲಗಾ ಗ್ರಾಮ ಪಂಚಾಯಿತಿ

ಹೇಳಿದವರಾರು ಎನ್ನುವುದು ಮುಖ್ಯ

ಹಿಂಡಲಗಾ ಗ್ರಾಮದಲ್ಲಿ ಸಂತೋಷ್ ಕೆಲಸ ಮಾಡಿಸಿದ್ದು ನಿಜ. ಗಮನಕ್ಕೆ ತಾರದೆ ಕೆಲಸ ನಡೆಸುತ್ತಿದ್ದ ಬಗ್ಗೆ ಜಿ.ಪಂ. ಅಧಿಕಾರಿಗಳಿಗೆ ತಿಳಿಸಿದ್ದೆ. ಕೆಲಸ ಮಾಡುವಂತೆ ಹೇಳಿದ್ದವರು ಯಾರು ಎಂಬುದು ಮುಖ್ಯವಾಗುತ್ತದೆ. ಆ ಬಗ್ಗೆ ತನಿಖೆಯಾಗಬೇಕು

ಲಕ್ಷ್ಮಿ ಹೆಬ್ಬಾಳಕರ, ಶಾಸಕಿ, ಗ್ರಾಮೀಣ ವಿಧಾನಸಭಾ ಕ್ಷೇತ್ರ

ರಮೇಶ ಜಾರಕಿಹೊಳಿ ಬೆಂಬಲಿಗ

ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬೆಂಬಲಿಗ ಆಗಿದ್ದ ಸಂತೋಷ್, ಹಿಂದೆ ಕಾಂಗ್ರೆಸ್‌ನಲ್ಲೂ ಗುರುತಿಸಿಕೊಂಡಿದ್ದರು. ಏಳೆಂಟು ವರ್ಷಗಳಿಂದ ಗುತ್ತಿಗೆದಾರರಾಗಿದ್ದರು. ‘ಕಳೆದ ಜಿ.ಪಂ. ಚುನಾವಣೆಯಲ್ಲಿ ಬಾಗೇವಾಡಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ಗಾಗಿ ಆ ಪಕ್ಷದ ನಾಯಕ ರಾಹುಲ್‌ ಗಾಂಧಿ ಸಹಿ ಫೋರ್ಜರಿ ಮಾಡಿ ಕೆಪಿಸಿಸಿಗೆ ಶಿಫಾರಸು ಪತ್ರ ನೀಡಿದ್ದರು’ ಎಂಬ ಆರೋಪ ಸಂತೋಷ್ ವಿರುದ್ಧ ಕೇಳಿಬಂದಿತ್ತು.


Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ