ಮಂಗಳೂರು: ನಗರದ ಅಗ್ನಿಶಾಮಕದಳ ಕಚೇರಿಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಗಂಗಾಧರ ಬಿ. ಕಮ್ಮಾರ (36) ಶನಿವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಕುಂಟಿಕಾನ ಬಳಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಸಾವಿಗೀಡಾಗಿದ್ದಾರೆ.
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಾಯಚೂರು ಜಿಲ್ಲೆ ಲಿಂಗಸಗೂರುನಲ್ಲಿದ್ದ ಅವರ ಪತ್ನಿ ಶ್ರುತಿ (30) ತಮ್ಮ 6 ತಿಂಗಳ ಮಗು ಅಭಿರಾಮನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ರಾತ್ರಿ 8.50ರ ವೇಳೆಗೆ ಅಪಘಾತ ಸಂಭವಿಸಿದ್ದು, ಬೆಂಗಳೂರಿನಿಂದ ಕುಂದಾಪುರ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾತ್ರಿ 10 ಗಂಟೆಯ ವೇಳೆಗೆ ತನ್ನ ತಮ್ಮನ ಮನೆಯಲ್ಲಿದ್ದ ಶ್ರುತಿ ಅವರಿಗೆ ಈ ವಿಷಯ ತಿಳಿದು ಬಂದಿದ್ದು, ತೀವ್ರ ಆಘಾತಕ್ಕೆ ಒಳಗಾದ ಅವರು ಮಗುವನ್ನೂ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಪಘಾತ ಕುರಿತಂತೆ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.