ಶಿವಮೊಗ್ಗ: ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಶುಕ್ರವಾರ ಬೆಂಗಳೂರಿಗೆ ತೆರಳುವ ಮುನ್ನ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲು ಕೆ.ಎಸ್.ಈಶ್ವರಪ್ಪ ಬರುತ್ತಿದ್ದಂತೆ ಅವರನ್ನು ಸುತ್ತುವರಿದ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡದಂತೆ ಈಶ್ವರಪ್ಪ ಎದುರು ಕಣ್ಣೀರು ಹಾಕಿದರು.
ಆ ವೇಳೆ ಮಹಿಳಾ ಕಾರ್ಯಕರ್ತರನ್ನು ಸಂತೈಸಲು ಮುಂದಾದ ಈಶ್ವರಪ್ಪ, ನೀವು ಹೀಗೆ ಅಳುತ್ತಿದ್ದರೆ ನಾನು ಇಲ್ಲಿಂದ ಹೋಗುವುದೇ ಇಲ್ಲ. ಸಂತೋಷದಿಂದ ಕಳಿಸಿಕೊಡಿ ಎಂದು ಮನವಿ ಮಾಡಿದರು. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ. ನಾಳೆ ಮತ್ತೆ ಬರುತ್ತೇನೆ ಎಂದು ಸಮಾಧಾನ ಪಡಿಸಿದರು.
ನನ್ನ ವಿರುದ್ಧ ಷಡ್ಯಂತ್ರ ನಡೆಸಿದ ವ್ಯಕ್ತಿಗಳಿಗೆ ತಾತ್ಕಾಲಿಕವಾಗಿ ಯಶಸ್ಸು ಸಿಕ್ಕಿರಬಹುದು. ಆದರೆ ನನ್ನನ್ನು ಇಷ್ಟು ವರ್ಷ ಬೆಳೆಸಿದ ಸಂಘಟನೆ, ಸಂಘದ ಪ್ರಮುಖರು, ಕಾರ್ಯಕರ್ತರಿಗೆ ಮೇಲ್ಪಂಕ್ತಿಯಾಗಲಿ ಎಂಬ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನೀವು ಅಳುತ್ತಾ ನನ್ನನ್ನು ಕಳಿಸಿಕೊಡಬೇಡಿ ಎಂದು ಮನವಿ ಮಾಡಿದರು.