ಕುಂದಾಪುರ: ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತದ ನಿರ್ಬಂಧದ ನಡುವೆಯೂ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಗಂಗೊಳ್ಳಿಗೆ ಒಂದು ದಿನ ಮೊದಲೇ ಅಂದರೆ ಗುರುವಾರ ರಾತ್ರಿ ಆಗಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಗಂಗೊಳ್ಳಿಯ ವೀರೇಶ್ವರ ದೇವಸ್ಥಾನದಲ್ಲಿ ಎ. 15ರಂದು ನಡೆಯಲಿರುವ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಪ್ರಮೋದ್ ಮುತಾಲಿಕ್ ಅವರು ಭಾಗಿಯಾಗದಂತೆ ಬುಧವಾರ ಉಡುಪಿ ಜಿಲ್ಲಾಡಳಿತ ನಿರ್ಬಂಧ ಹೇರಿ ಆದೇಶಿಸಿತ್ತು.
ಕಾರ್ಯಕ್ರಮದ ಮುನ್ನಾದಿನವಾದ ಗುರುವಾರ ರಾತ್ರಿ ಗಂಗೊಳ್ಳಿಗೆ ಆಗಮಿಸಿದ ಮುತಾಲಿಕ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ, ಕಾರ್ಯಕ್ರಮದ ಕುರಿತಂತೆ ಹಿಂದೂ ಜಾಗರಣ ವೇದಿಕೆ ಪ್ರಮುಖರ ಜತೆ ಚರ್ಚಿಸಿದರು.
ಈ ವೇಳೆ ಮಾತಾಡಿದ ಮುತಾಲಿಕ್ ಅವರು, ಹಿಂದುತ್ವಕ್ಕಾಗಿಯೇ ಹೋರಾಟ ಮಾಡುತ್ತಿರುವ ನನಗೆ ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಸರಕಾರವೇ ನಿರ್ಬಂಧ ಹೇರುತ್ತಿರುವುದು ನಿಜಕ್ಕೂ ಬೇಸರ ತರಿಸಿದೆ. ಹಿಂದುತ್ವದ ಬಗ್ಗೆ ಇಲ್ಲಿ ಮಾತನಾಡದೆ ಇನ್ನೆಲ್ಲಿ ಮಾತನಾಡಬೇಕು ಎಂದು ಸರಕಾರ ಹಾಗೂ ಜಿಲ್ಲಾಡಳಿತವನ್ನು ಅವರು ಪ್ರಶ್ನಿಸಿದರು.
Laxmi News 24×7