ಬೆಂಗಳೂರು: ‘ಒಬ್ಬ ಮನುಷ್ಯ ಆಸೆಪಟ್ಟು ಕೆಲಸ ಮಾಡಿದರೆ ಇಡೀ ಜಗತ್ತು ಅವನ ಬೆನ್ನ ಹಿಂದೆ ನಿಲ್ಲುತ್ತದೆ ಎನ್ನುವುದಕ್ಕೆ ಇದೊಂದು ಅದ್ಭುತ ಉದಾಹರಣೆ…’ ಯಶ್ ಹೇಳಿದ್ದು ‘ಕೆಜಿಎಫ್ 2’ ಚಿತ್ರದ ಬಗ್ಗೆ. ಎಂಟು ವರ್ಷಗಳ ಹಿಂದೆ ಅವರು ‘ಕೆಜಿಎಫ್’ ಚಿತ್ರ ಶುರು ಮಾಡಿದಾಗ, ಅದು ಇಷ್ಟು ದೊಡ್ಡದಾಗಿ ಬೆಳೆಯಬಹುದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರಹೊಮ್ಮಬಹುದು, ಜಾಗತಿಕವಾಗಿ ಬಿಡುಗಡೆಯಾಗಬಹುದು … ಎಂದು ನಿರೀಕ್ಷಿಸುವುದಕ್ಕೆ ಸಾಧ್ಯವೇ ಇರಲಿಲ್ಲ.
ಈಗ ಅವೆಲ್ಲವೂ ಆಗುತ್ತಿದೆ. ‘ಕೆಜಿಎಫ್’ ಯಶಸ್ವಿಯಾಗಿದ್ದಷ್ಟೇ ಅಲ್ಲ, ಇಂದು ಬಿಡುಗಡೆಯಾಗುತ್ತಿರುವ ಅದರ ಮುಂದುವರಿದ ಭಾಗದ ಕುರಿತು ಸಾಕಷ್ಟು ಕುತೂಹಲ, ನಿರೀಕ್ಷೆಗಳಿವೆ.
ಈ ಬಗ್ಗೆ ಯಶ್ ಏನು ಹೇಳುತ್ತಾರೆ?
‘ಇದು ಬರೀ ನನ್ನೊಬ್ಬನಿಂದ ಆಗಿದ್ದಲ್ಲ. ನಾನು ಇಲ್ಲಿ ಮುಖ ಅಷ್ಟೇ. ಇಂಥದ್ದೊಂದು ಕನಸು ಕಂಡ ಪ್ರಶಾಂತ್ ನೀಲ್, ಆ ಕನಸಿನ ಮೇಲೆ ನಂಬಿಕೆ ಇಟ್ಟ ವಿಜಯ್ ಕುಮಾರ್ ಕಿರಗಂದೂರು ಬಹಳ ಕಷ್ಟಪಟ್ಟಿದ್ದಾರೆ. ಎರಡು ಎನರ್ಜಿಗಳು ಒಟ್ಟಿಗೆ ಸೇರಿದರೆ ಏನೋ ಆಗುತ್ತದೆ. ಜನ ಈ ಚಿತ್ರವನ್ನು ಇಷ್ಟಪಟ್ಟರೆ, ಇನ್ನೂ ದೊಡ್ಡ ಶಕ್ತಿ ಸಿಕ್ಕಂತಾಗುತ್ತದೆ’ ಎನ್ನುತ್ತಾರೆ.
ಈ ಚಿತ್ರದಿಂದ ತುಂಬಾ ಕಲಿತೆ ಎನ್ನುವ ಅವರು, ‘ಈ ಜರ್ನಿ ಅದ್ಭುತವಾಗಿತ್ತು. ನಾವು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ. ಒಳ್ಳೆಯ ಸಮಯ ಕಳೆದಿದ್ದೇವೆ. ಇನ್ನಷ್ಟು ಗಟ್ಟಿಯಾಗಿದ್ದೇವೆ. ಕೆಲವೊಮ್ಮೆ ನಮ್ಮ ಅಭಿಪ್ರಾಯಗಳು ಬೇರೆ ಆಗಿರಬಹುದು. ಆದರೆ, ನಾವು ಸಿನಿಮಾ ಬಿಟ್ಟು ಬೇರೇನೂ ಯೋಚಿಸಲೇ ಇಲ್ಲ. ಒಂದೊಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ’ ಎನ್ನುತ್ತಾರೆ ಯಶ್.