Breaking News

ಜಿಎಸ್‌ಟಿ, ಇಂಧನ ದರ ಏರಿಕೆಯ ಪರಿಣಾಮ: ಕಬ್ಬಿಣ, ಸಿಮೆಂಟ್‌ ಮತ್ತಷ್ಟು ದುಬಾರಿ

Spread the love

ಬೆಂಗಳೂರು: ಕಬ್ಬಿಣ, ಸಿಮೆಂಟ್, ಸ್ಯಾನಿಟರಿ, ಬಣ್ಣ, ಎಲೆಕ್ಟ್ರಿಕಲ್, ಅಲ್ಯುಮಿನಿಯಂ ಸೇರಿ ಎಲ್ಲ ವಸ್ತುಗಳ ಬೆಲೆ ನಿರ್ಮಾಣ ಕ್ಷೇತ್ರವೇ ಬೆರಗಾಗುವಷ್ಟು ಗಗನಮುಖಿಯಾಗಿದೆ. ಇದು ಸ್ವಂತ ಮನೆ ಕಟ್ಟಿಕೊಳ್ಳುವ ಜನರ ಕನಸಿಗೆ ನುಚ್ಚುನೂರು ಮಾಡಿದ್ದರೆ, ಸರ್ಕಾರಿ ಕಾಮಗಾರಿಗಳ ಮೇಲೂ ಪರಿಣಾಮ ಬೀರಿದೆ.

 

ಜಿಎಸ್‌ಟಿ ಮತ್ತು ಇಂಧನ ದರ ಏರಿಕೆಯಿಂದ ನಿರ್ಮಾಣ ಪರಿಕರಗಳ ಬೆಲೆಯೂ ಏರುಗತಿಯಲ್ಲೇ ಮುಂದುವರಿದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಳೆದ ನವೆಂಬರ್ ವೇಳೆಗೆ ಶೇ 40ರಿಂದ ಶೇ 50ರಷ್ಟು ಹೆಚ್ಚಳವಾಗಿದ್ದ ದರ, ಈಗ ಮತ್ತೆ ಶೇ 15ರಿಂದ ಶೇ 20ರಷ್ಟು ಹೆಚ್ಚಾಗಿದೆ. ಸಾಧಾರಣ ದರ್ಜೆಯ 10 ಚದರ (ಒಂದು ಸಾವಿರ ಚದರ ಅಡಿ) ಮನೆ ನಿರ್ಮಾಣಕ್ಕೆ ಒಂದು ವರ್ಷದ ಹಿಂದೆ ₹15 ಲಕ್ಷ ಇದ್ದ ನಿರ್ಮಾಣ ವೆಚ್ಚ 2021ರ ನವೆಂಬರ್ ವೇಳೆಗೆ ₹20 ಲಕ್ಷ ದಾಟಿತ್ತು. ಈಗ ₹25 ಲಕ್ಷ ಮೀರಿದೆ. ಒಳಾಂಗಣಕ್ಕೆ ಬಳಸುವ ವಸ್ತುಗಳ (ಟೈಲ್ಸ್, ಸ್ಯಾನಿಟರಿ ಸಲಕರಣೆ, ಬಣ್ಣ, ಎಲೆಕ್ಟ್ರಿಕಲ್ ವಸ್ತುಗಳು ಇತ್ಯಾದಿ) ಬೆಲೆಯೂ ಏರಿದೆ. ಅವುಗಳ ಗುಣಮಟ್ಟಕ್ಕೆ ತಕ್ಕಂತೆ ವೆಚ್ಚ ಇನ್ನಷ್ಟು ಹೆಚ್ಚಾಗುತ್ತಿದೆ.

ಒಂದು ತಿಂಗಳ ಹಿಂದೆ ಟನ್‌ಗೆ ₹68 ಸಾವಿರದಿಂದ ₹78 ಸಾವಿರ ಇದ್ದ ಕಬ್ಬಿಣದ ಬೆಲೆ ಈಗ ₹90 ಸಾವಿರದಿಂದ ₹99 ಸಾವಿರ ತನಕ ಏರಿಕೆಯಾಗಿದೆ. ಸಿಮೆಂಟ್‌ ದರವೂ ಚೀಲಕ್ಕೆ ₹50 ಜಾಸ್ತಿಯಾಗಿದೆ.

ಕಬ್ಬಿಣ ಮತ್ತು ಸಿಮೆಂಟ್ ದರ ಏರಿಕೆ ಮನೆ ‌ನಿರ್ಮಾಣ ಕೆಲಸ ಆರಂಭಿಸಿರುವವರ ಲೆಕ್ಕಾಚಾರವನ್ನೇ ತಲೆಕೆಳಗು ಮಾಡಿದೆ. ಕೂಡಿಟ್ಟ ಹಣ, ಬ್ಯಾಂಕ್ ಸಾಲ, ಕೈ ಸಾಲ ಎಲ್ಲವನ್ನೂ ಸೇರಿಸಿ ಯೋಜನೆ ರೂಪಿಸಿದ್ದದರೂ ಕಾಮಗಾರಿ ಪೂರ್ಣವಾಗದೇ ಸ್ಥಗಿತಗೊಳಿಸುವಂತಾಗಿದೆ.

‘₹80 ಲಕ್ಷದಲ್ಲಿ ಮನೆ ನಿರ್ಮಾಣ ಪೂರ್ಣಗೊಳಿಸಲು ಯೋಜನೆ ರೂಪಿಸಿಕೊಂಡಿದ್ದೆವು. ಕಬ್ಬಿಣ, ಸಿಮೆಂಟ್‌ ದರ ಏರಿಕೆಯಿಂದಾಗಿ ಇನ್ನೂ ಶೇ 30ರಷ್ಟು ಕಾಮಗಾರಿ ಬಾಕಿ ಉಳಿಯುವ ಸಾಧ್ಯತೆ ಇದೆ’ ಎಂದು ಚನ್ನರಾಯಪಟ್ಟಣದಲ್ಲಿ ಮನೆ ನಿರ್ಮಾಣ ಮಾಡುತ್ತಿರುವ ಎನ್‌.ಆರ್. ಸಂತೋಷ್‌ ಹೇಳಿದರು.


Spread the love

About Laxminews 24x7

Check Also

ಬಾಬಾನಗರದ ನೆಲದಲ್ಲಿ ಹೊಸ ಕೃಷಿ ಕ್ರಾಂತಿ; ರೆಡ್ ಡೈಮಂಡ್ ಪೇರಲ ಬೆಳೆದು ಸಚಿವರಿಗೆ ಉಡುಗೊರೆ ನೀಡಿದ ರೈತ*

Spread the love : ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಬರುವ ತಿಕೋಟಾ ತಾಲ್ಲೂಕಿನ ಬಾಬಾನಗರದ ನೆಲದಲ್ಲಿ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ