ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗುತ್ತಿದ್ದಂತೆ, ರಾಜ್ಯದಲ್ಲಿ ಆ ಪಕ್ಷದ ಮರು ಪ್ರವೇಶದ ಸೂಚನೆ ನೀಡಿದೆ. ಕೇಜ್ರಿವಾಲ್ ಪಕ್ಷಕ್ಕೆ ಕರ್ನಾಟಕ ಹೊಸದೇನಲ್ಲ.
2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ರಾಜ್ಯದ ಜನರಿಗೆ ತನ್ನ ಪರಿಚಯ ಮಾಡಿಕೊಂಡಿತ್ತು. ಆದರೆ, ಬೇರು ಗಟ್ಟಿಮಾಡಿಕೊಳ್ಳಲು ಪ್ರಯತ್ನಿಸಿ ಸೋತಿತ್ತು. ಆದರೀಗ ದೊಡ್ಡ ಉದ್ದೇಶ ಇಟ್ಟುಕೊಂಡಂತೆ ಪ್ರವೇಶ ಮಾಡುವ ಸುಳಿವು ನೀಡಿದೆ.
ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಸ್ಪರ್ಧಿಸುವ ಗುರಿಯೊಂದಿಗೆ ಸಾಕಷ್ಟು ಪೂರ್ವಭಾವಿಯಾಗಿ ಯೋಜನೆ ಸಿದ್ಧಪಡಿಸಿಕೊಳ್ಳಲು ಪ್ರಯತ್ನಿಸಿದಂತೆ ಕಾಣಿಸಿದೆ. ಪೊಲೀಸ್ ಅಧಿಕಾರಿಯಾಗಿ ಭಾಸ್ಕರ್ ರಾವ್ ರಾಜ್ಯದಲ್ಲಿ ಚಿರಪರಿಚಿತ ಮುಖ. ಅವರ ರಾಜಕೀಯಕ್ಕೆ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಪಕ್ಷದ ಬಗ್ಗೆ ರಾಜಕೀಯ ಆಸಕ್ತರಿಗೆ ಸಹಜವಾಗಿ ಒಂದಷ್ಟು ಕುತೂಹಲ ಸೃಷ್ಟಿಸಿರಲೂ ಸಾಕು. ಇದು ಮುಂದಿನ ಚುನಾವಣೆಗೆ ಮುನ್ನ ರಾಜಕೀಯ ಧ್ರುವೀಕರಣದ ಮೇಲೆಯೂ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರವಿದೆ.
ಪಕ್ಷಗಳ ವಿಚಾರಕ್ಕೆ ಬಂದರೆ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಒಳಗೆ ಆಮ್ ಆದ್ಮಿ ಬೆಳವಣಿಗೆ ಬಗ್ಗೆ ವಿಶೇಷ ಗಮನವಹಿಸಿವೆ. ಭಾಸ್ಕರ್ ರಾವ್ ಬಳಿಕ ಇನ್ಯಾರು ಪಕ್ಷ ಸೇರಬಹುದು, ಸಾಹಿತಿಗಳು, ಉದ್ಯಮಿಗಳು, ಚಿತ್ರರಂಗದವರು, ಜನ ಸಾಮಾನ್ಯರು ರಾಜಕೀಯದ ಹಿನ್ನೆಲೆ ಇಲ್ಲದಿದ್ದರೂ ಆಮ್ ಆದ್ಮಿ ಮೂಲಕ ಕಣಕ್ಕಿಳಿದರೆ ಆಗುವ ರಾಜಕೀಯ ಪಲ್ಲಟಗಳು, ತಮ್ಮ ಪಕ್ಷದ ಮೇಲಾಗುವ ಪರಿಣಾಮ, ಆಮ್ ಆದ್ಮಿ ಮಾಡುವ ಮತ ವಿಭಜನೆಯಿಂದ ಆಗುವ ಹೊಡೆತದ ಬಗ್ಗೆ ಅನೌಪಚಾರಿಕ ಚರ್ಚೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ನಡೆದಿದೆ. ಜೆಡಿಎಸ್ ಅಷ್ಟಾಗಿ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ.
ಕಾಂಗ್ರೆಸ್ ಲೆಕ್ಕಾಚಾರ: ಎಎಪಿ ಆಟ ಕರ್ನಾಟಕದಲ್ಲಿ ನಡೆಯಲ್ಲ ಎಂದು ಘಂಟಾಘೋಷವಾಗಿ ಹೇಳುವ ಕಾಂಗ್ರೆಸ್ ನಾಯಕರಲ್ಲಿ ಒಳಗೊಳಗೆ ಅಳುಕಂತೂ ಇದ್ದೇಇದೆ. ಇದಕ್ಕೆ ಪ್ರಮುಖ ಕಾರಣ, ಆಮ್ ಆದ್ಮಿ ಕಾಂಗ್ರೆಸ್ಗೆ ಪರ್ಯಾಯ ಎಂದು ಇತ್ತೀಚೆಗೆ ಬಿಂಬಿತವಾಗುತ್ತಿದೆ. ಬಿಜೆಪಿಯೇತರ ಮತಗಳನ್ನು ಸೆಳೆಯುವಲ್ಲಿ ಆಮ್ ಆದ್ಮಿ ಸಫಲವಾದ ಉದಾಹರಣೆ ಇದೆ. ಪ್ರಬಲ ಅಭ್ಯರ್ಥಿ ಕಣಕ್ಕಿಳಿದರೆ ಚುನಾವಣೆಯಲ್ಲಿ ತನಗೊಂದಿಷ್ಟು ಹಾನಿಯಂತೂ ಖಚಿತ ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ. ಕೆಲವು ಕಡೆ ದೊಡ್ಡ ಗೆಲುವಿನ ಅಂತರಕ್ಕೆ ಹೊಡೆತ ಕೊಡಬಹುದು, ತೀವ್ರ ಪೈಪೋಟಿ ಇರುವ ಕಡೆ ಸೋಲಿಗೂ ಜಾರಬಹುದು ಎಂಬ ಅಂದಾಜಿದೆ.
ಬಿಜೆಪಿ ದೃಷ್ಟಿಕೋನ: ಆಮ್ದಿಮ ಪಾರ್ಟಿ ಪಡೆಯುವ ಮತಗಳಲ್ಲಿ ಬಹುಪಾಲು ಕಾಂಗ್ರೆಸ್ನದ್ದೇ ಆಗಿರುತ್ತದೆ. ಇನ್ನೂ ಮೋದಿ ಹವಾ ಕಡಿಮೆ ಆಗಿಲ್ಲ, ಜಾತಿ ಸಮೀಕರಣ ಮೀರಿದ ರಾಜಕಾರಣ ನಡೆಯುವ ಸಾಧ್ಯತೆ ಕರ್ನಾಟಕದ ಮಟ್ಟಿಗೆ ಕಡಿಮೆ ಇದೆ. ಹೀಗಾಗಿ ಆಮ್ ಆದ್ಮಿ ಬಲಗೊಳ್ಳುವುದರಿಂದ, ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಪಕ್ಷಕ್ಕೆ ಹಾನಿ ಕಡಿಮೆ ಎಂಬುದು ಬಿಜೆಪಿ ನಾಯಕರ ಅಂದಾಜು. ಪ್ರಬಲ ಅಭ್ಯರ್ಥಿಗಳು ಕಣಕ್ಕಿಳಿದು ಪೈಪೋಟಿ ನೀಡಿದರೆ ಭದ್ರ ನೆಲೆ ಇರುವ ಕ್ಷೇತ್ರದಲ್ಲಿ ಹೆಚ್ಚು ಶ್ರಮ ಹಾಕಬೇಕಾಗಬಹುದು ಎಂದು ಬಿಜೆಪಿ ನಾಯಕರು ದೂರದೃಷ್ಟಿಯ ಆಲೋಚನೆಯಲ್ಲಿ ಅಭಿಪ್ರಾಯ ನೀಡಿದ್ದಾರೆ.
ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು
ಸರ್ಕಾರದ ಕೆಲಸ ಮಾಡಿಕೊಡಲೂ ಲಂಚ | ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಕಳವಳ