ರೋಣ (ಗದಗ): ಅಮ್ಮಾ… ಗೆಳೆಯನಿಗೆ ಆಯಕ್ಸಿಡೆಂಟ್ ಆಗಿ ಆಸ್ಪತ್ರೆ ಸೇರಿದ್ದಾನೆ. ನೋಡಿಕೊಂಡು ಬರುತ್ತೇವೆ ಎಂದು ಮನೆಯಲ್ಲಿ ಹೇಳಿಹೋಗಿದ್ದ ಮೂವರು ಪ್ರಾಣಸ್ನೇಹಿತರು ಶವವಾಗಿ ಹೋಗಿರುವ ದಾರುಣ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.
ಕಳೆದ ಶನಿವಾರ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಮೂವರು ಯುವಕರ ಪರಿಚಯ ಸಿಕ್ಕಿದ್ದು, ಇವರೆಲ್ಲರೂ
ಆಪ್ತ ಸ್ನೇಹಿತರಾಗಿದ್ದಾರೆ. ದರ್ಶನ ರಮೇಶ ರಾಜಪುರೋಹಿತ (19), ಶೌಕತ್ ಅಲಿ ಪಠಾಣ (22), ಮೆಹಪೂಜ್ (25) ಸಾವಿಗೀಡಾಗಿದ್ದರೆ, ಅಪ್ಸಾನಾ ಮುಲ್ಲಾ (20) ಗಾಯಗೊಂಡಿದ್ದಾರೆ.
ಈ ಮೂವರು ಸ್ನೇಹಿತರು ಆಸ್ಪತ್ರೆಗೆ ದಾಖಲಾಗಿದ್ದ ಇನ್ನೋರ್ವ ಸ್ನೇಹಿತನನ್ನು ನೋಡಲು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಆ ಕಾರು ಹೊತ್ತಿ ಉರಿದಿದೆ.
ಅದೇ ರಸ್ತೆಯಲ್ಲಿ ಹೊರಟಿದ್ದ ಲಾರಿ ಚಾಲಕನೊಬ್ಬ ಜೀವದ ಹಂಗು ತೊರೆದು ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರಿನಲ್ಲಿದ್ದ ನಾಲ್ಕು ಯುವಕರನ್ನು ಬದುಕುಳಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಮೂವರು ಅಲ್ಲಿಯೇ ಮೃತಪಟ್ಟಿದ್ದರೆ, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.