ಮೈಸೂರು, ಮಾರ್ಚ್ 18: ಪ್ರಧಾನಿ ನರೇಂದ್ರ ಮೋದಿಯವರು ಒಳ್ಳೆಯ ಕೆಲಸ ಮಾಡಿದಾಗ ನಾನು ಅವರನ್ನು ಬೆಂಬಲಿಸಿರುವುದು ನಿಜ. ಹಾಗಾಗಿ, ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾ ಬಂದ ಬಳಿಕವೂ ನನ್ನನ್ನು ಮೋದಿ ಚಮಚಾ ಎನ್ನುತ್ತಿದ್ದಾರೆ. ಇದಕ್ಕೆ ನಾನು ಕೇರ್ ಮಾಡುವುದಿಲ್ಲ ಎಂದು ನಟ ಕಂ ನಿರ್ದೇಶಕ ಪ್ರಕಾಶ್ ಬೆಳವಾಡಿ ತಿಳಿಸಿದ್ದಾರೆ.
ಮೈಸೂರಿನ ಡಿಆರ್‌ಸಿಯಲ್ಲಿ ವಿವಿಧ ಕ್ಷೇತ್ರದ ಪ್ರಮುಖರ ಜತೆ ಆಯೋಜಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆ ಬಳಿಕ ಮಾತನಾಡಿದ ಅವರು, ”ಮೋದಿ ಸರಕಾರ ಆಡಳಿತದಲ್ಲಿ ಇಲ್ಲದೇ ಹೋಗಿದ್ದರೆ ಈ ಸಿನಿಮಾ ಬಿಡುಗಡೆ ಆಗುತ್ತಲೇ ಇರಲಿಲ್ಲ,” ಎಂಬ ಬೆಳವಾಡಿ ಮಾತಿಗೆ ಮೈಸೂರಿನ ಗಣ್ಯರು ತಲೆದೂಗಿದರು, ಚಪ್ಪಾಳೆ ಹೊಡೆದರು.
‘ಕೆಲವರು ಈ ಸಿನಿಮಾ ಪ್ರಚಾರಕ್ಕೆ ಬಳಕೆಯಾಗುತ್ತಿದೆ ಎಂದೆಲ್ಲಾ ಟೀಕಿಸುತ್ತಿದ್ದಾರೆ. ನನ್ನ ಪ್ರಕಾರ ಈ ಸಿನಿಮಾ ಸತ್ಯವೊಂದರ ಪ್ರಚಾರ. ಇದು ಪಕ್ಷಪಾತಿಯೂ ಹೌದು. ಆದರೆ ಇದರ ಉದ್ದೇಶ ಸತ್ಯಶೋಧನೆ. ಇದೇ ಘಟನೆ ಕುರಿತು ಬೇರೆ ಥರ ಸತ್ಯ ಇದ್ದರೆ, ನೀವು ಸಿನಿಮಾ ಮಾಡಿ,” ಎಂದು ಟೀಕಾಕಾರರಿಗೆ ಸವಾಲು ಹಾಕಿದರು.
”90ರ ದಶಕದಲ್ಲಿ ಅತಿ ಕಡಿಮೆ ಎಂದರೂ 60 ಸಾವಿರ ಪಂಡಿತರ ಕುಟುಂಬಗಳು ದೌರ್ಜನ್ಯ ತಾಳಲಾರದೆ ಕಾಶ್ಮೀರ ತೊರೆದವು. ಒಂದೊಂದು ಮನೆಯಲ್ಲೂ ಐದಾರು ಜನ ಎಂದಿಟ್ಟುಕೊಂಡರೂ, ಎಷ್ಟೊಂದು ಜನ ತಮ್ಮದೇ ನೆಲದಲ್ಲಿ ಪರಕೀಯರಾಗಿ, ನಿರಾಶ್ರಿತರಾದರು,” ಎಂದರು.
”1990 ಹಾಗೂ ನಂತರದ ಐದಾರು ವರ್ಷ ಕಾಶ್ಮೀರದಲ್ಲಿ ನಡೆದ ದೌರ್ಜನ್ಯಕ್ಕೆ ತುತ್ತಾದವರು ಎಷ್ಟು? ಸತ್ತವರ ಸಂಖ್ಯೆ ಎಷ್ಟು ಎಂದು ಮಾಹಿತಿ ಹಕ್ಕು ಕಾಯಿದೆಯಡಿ ಪಡೆದಿರುವ ಮಾಹಿತಿಯನ್ನು ಮುಂದೊಡ್ಡುತ್ತಿದ್ದಾರೆ. ಆದರೆ, ಈ ಎಲ್ಲ ದೌರ್ಜನ್ಯ ನಡೆದಾಗ ಅಲ್ಲಿನ ವ್ಯವಸ್ಥೆಯೇ ದುರುಳರ ಜತೆ ಶಾಮೀಲಾಗಿತ್ತು. ಲಭ್ಯ ದಾಖಲೆಗಳನ್ನು ನಾಶ ಮಾಡಲಾಗಿದೆ,” ಎಂದು ಬೇಸರ ವ್ಯಕ್ತಪಡಿಸಿದರು.