ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯಪುರದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಉಚಿತ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಹಿಂದೆ ಕೂಡ ಕೆಲವು ಚಿತ್ರಗಳಿಗೆ ಯತ್ನಾಳ್ ಉಚಿತ ಪ್ರದರ್ಶನ ಏರ್ಪಡಿಸಿದ್ದರು.
ಚಿತ್ರವನ್ನು ವಿಧಾನಸಭೆ ಸಚಿವಾಲಯದಿಂದ ರಾಜ್ಯದ ಶಾಸಕರು ಹಾಗೂ ಸಚಿವರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಈ ನಡುವೆ ಮಾಜಿ ಸಚಿವ, ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಿಜಯಪುರದಲ್ಲಿ ಚಿತ್ರದ ಉಚಿತ ಪ್ರದರ್ಶನ ಏರ್ಪಡಿಸುವುದಾಗಿ ಘೋಷಿಸಿದ್ದಾರೆ. ಮಾರ್ಚ್ 21ರಂದು ವಿಜಯಪುರ ಜಿಲ್ಲೆಯಲ್ಲಿ ‘ದಿ ಕಾಶ್ಮೀರ ಫೈಲ್ಸ್’ ಬಿಡುಗಡೆ ಮಾಡಲಾಗುತ್ತಿದ್ದು, ಅಪ್ಸರಾ ಚಿತ್ರಮಂದಿರದಲ್ಲಿ ಉಚಿತ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸತತ ಒಂದು ವಾರಗಳ ಕಾಲ ಪ್ರತಿನಿತ್ಯ ಮಧ್ಯಾಹ್ನದ ಶೋವನ್ನು ಉಚಿತವಾಗಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ”ದಿ ಕಾಶ್ಮೀರಿ ಫೈಲ್ಸ್ ಸಿನಿಮಾವನ್ನ ವಿಜಯಪುರದಲ್ಲಿ ಫ್ರೀ ಶೋ ಮಾಡಿ, ನಾನೇ ರೊಕ್ಕ ಕೊಡುತ್ತೇನೆ. ಕಾಶ್ಮೀರಿ ಪಂಡಿತರ ಮೇಲೆ ಆಗಿರುವ ದೌರ್ಜನ್ಯವನ್ನು ಸಿನಿಮಾದಲ್ಲಿ ಕಣ್ಣಿಗೆ ಕಟ್ಟಿದಂತೆ ತೋರಿಸಿದ್ದಾರೆ. ಇದು ಇಂದಿನ ಯುವಪೀಳಿಗೆಗೂ ಗೊತ್ತಾಗಬೇಕು” ಎಂದು ಅವರು ಹೇಳಿದ್ದಾರೆ.