ಕಲಬುರಗಿ: ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ 2022-23 ರ ಬಜೆಟ್‌ಗೆ ದಿಕ್ಕು ದೆಸೆಯಿಲ್ಲ, ಯಾವುದೇ ಮುಂದಾಲೋಚನೆ ಇಲ್ಲದ ಬಜೆಟ್ ಇದಾಗಿದ್ದು ಕಲ್ಯಾಣ ಕರ್ನಾಟಕದ ಅಭಿವೃದ್ದಿ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ವರ್ಷದಲ್ಲಿ 2,65,000 ಕೋಟಿ ಮೌಲ್ಯದ ಬಜೆಟ್ ಮಂಡನೆ ಮಾಡಲಾಗಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೇಳಿಕೊಳ್ಳುವಂತಹ ಯೋಜನೆಗಳಿಲ್ಲ. ಕೇವಲ 3000 ಕೋಟಿ ರೂ ಘೋಷಣೆ ಮಾಡಲಾಗಿದೆ. ಆದರೆ ಅನುದಾನ ಹೇಗೆ ಬಳಸಿಕೊಳ್ಳಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಕಳೆದೆರಡು ವರ್ಷದಲ್ಲಿ ಬಿಡುಗಡೆಯಾದ 1,100 ಕೋಟಿಯಲ್ಲಿ ಕೇವಲ 402 ಕೋಟಿ ರೂ ಮಾತ್ರ ಖರ್ಚು ಮಾಡಲಾಗಿದೆ ಎಂದು ಹೇಳಿದರು.
ಶಿಕ್ಷಣ ಕೇತ್ರದಲ್ಲಿ 20,000 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ತುಂಬಲು ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಬಡತನ ತಾಂಡವವಾಡುತ್ತಿದೆ, ಬಡತನ ಹೋಗಲಾಡಿಸಲು ಕ್ರಮ ಕೈಗೊಂಡಿಲ್ಲ, ನೀರಾವರಿ ಯೋಜನೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಅಲ್ಲದೆ ಕಲ್ಯಾಣ ಕರ್ನಾಟಕ ಭಾಗದ ಜನರನ್ನು ಎರಡನೆಯ ದರ್ಜೆ ನಾಗರಿಕರಂತೆ ಪರಿಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.