ಬೆಂಗಳೂರು : ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಎಲ್ಲವೂ ಸರಿಯಾಗಿಲ್ಲ ಎಂಬುದು ದಿನೇ ದಿನೇ ಮನದಟ್ಟಾಗುತ್ತಿದೆ.
ಇಲ್ಲಿರುವ ಅಧಿಕಾರಿಗಳು ಕಾನೂನಿಗಿಂತ ಮೇಲಿದ್ದೇವೆ ಎಂದು ಭಾವಿಸಿದಂತಿದೆ. ಇವರಿಗೆಲ್ಲಾ ಕಾನೂನು ಎಂದರೆ ಏನು ಎಂಬುದನ್ನು ಅರ್ಥ ಮಾಡಿಸುವ ಸಮಯ ಹತ್ತಿರ ಬಂದಿದೆ’ ಎಂದು ಹೈಕೋರ್ಟ್ ಗುಡುಗಿದೆ.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ’ ಎಂದು ಆಕ್ಷೇಪಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಗ್ರಹಿಸಲಾಗುವ ಕಸವನ್ನು ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಸುರಿಯದಂತೆ ನ್ಯಾಯಾಲಯದ ಸ್ಪಷ್ಟ ನಿರ್ಬಂಧ ಇದ್ದರೂ ಈ ಆದೇಶವನ್ನು ಉಲ್ಲಂಘಿಸಲಾಗಿದೆ’ ಎಂಬ ಆಕ್ಷೇಪಣೆಗೆ ನ್ಯಾಯಪೀಠ ಗರಂ ಆಯಿತು. ಮುಖ್ಯ ನ್ಯಾಯಮೂರ್ತಿಗಳಂತೂ ಬಿಬಿಎಂಪಿ ಪರ ಹಾಜರಾಗಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರನ್ನು, ‘ನೀವು ಹಿರಿಯ ವಕೀಲರಾಗಿ ಇಂಥ ಆಯುಕ್ತರನ್ನು ಸಮರ್ಥಿಸಿಕೊಳ್ಳುತ್ತಿರುವುದು ವಿಷಾದನೀಯ’ ಎಂದು ವ್ಯಥೆಯನ್ನು ಹೊರಹಾಕಿದರು.