ಬೆಂಗಳೂರು, ಮಾರ್ಚ್ 04: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನ್ನ ಚೊಚ್ಚಲ ಬಜೆಟ್ ಅನ್ನು ಮಾರ್ಚ್ 4ರಂದು ಮಂಡನೆ ಮಾಡಲಿದ್ದಾರೆ. ಈ ನಡುವೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ವಾರ್ಷಿಕ 1000 ಕೋಟಿ ರೂ.ಗಳನ್ನು ಮಂಜೂರು ಮಾಡುವಂತೆ ಸಾರ್ವಜನಿಕ ಸಾರಿಗೆ ವಕೀಲರ ಗುಂಪು ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ (ಬಿಬಿಪಿವಿ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಬಿ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದೆ.
ಇದರಿಂದಾಗಿ ಸಾಮಾನ್ಯ ಜನರಿಗೆ ಬಸ್ ದರವನ್ನು ಕಡಿಮೆ ಮಾಡಬಹುದು ಮತ್ತು ಮಹಿಳೆಯರು, ತೃತೀಯಲಿಂಗಿಗಳು, ಹಿರಿಯ ನಾಗರಿಕರಿಗೆ ಉಚಿತವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಬಹುದು ಎಂದು ಹೇಳಿದೆ.
ಈ ಮನವಿಗೆ 6500ಕ್ಕೂ ಹೆಚ್ಚು ಸಹಿಗಳು ಲಭ್ಯವಾಗಿದೆ. “ಬಿಎಂಟಿಸಿ ಬಸ್ಸುಗಳು ಬೆಂಗಳೂರಿನ ಸಾರಿಗೆಯ ಜೀವನಾಡಿ. ಸಾಂಕ್ರಾಮಿಕ ರೋಗದ ಮೊದಲು, ಬಿಎಂಟಿಸಿಯಲ್ಲಿ 35 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಬಿಎಂಟಿಸಿ ದರಗಳು ಸಹ ಎಲ್ಲಾ ಭಾರತೀಯ ನಗರಗಳಲ್ಲಿ ಅತ್ಯಧಿಕವಾಗಿದೆ. ಬಿಎಂಟಿಸಿ ಬಸ್‌ಗಳ ಪ್ರಯಾಣದ ದುಬಾರಿ ವೆಚ್ಚವು ಈಗಾಗಲೇ ನಗರ ಬಡವರ ಅಲ್ಪ ಸಂಪಾದನೆಯನ್ನು ಹಿಂಡುತ್ತಿದೆ,” ಎಂದು ಮನವಿಯಲ್ಲಿ ಉಲ್ಲೇಖ ಮಾಡಲಾಗಿದೆ.