ಪುತ್ತೂರು: ಸೌಂದರ್ಯವರ್ಧಕ ಕ್ಷೇತ್ರವೆನಿಸಿದ ಮಾಡೆಲಿಂಗ್ ಕ್ಷೇತ್ರಕ್ಕೆ ಹುಡುಗರು, ಹುಡುಗಿಯರು ಫಿದಾ ಆಗುವುದು ಸಹಜ. ಈ ಮಾಡೆಲಿಂಗ್ ಕ್ಷೇತ್ರವು ಹಲವರು ಪ್ರತಿಭಾವಂತರನ್ನು ಕೈ ಬೀಸಿ ಕರೆಯುತ್ತಿದೆ. ಈ ನಿಟ್ಟಿನಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಯುವತಿಯೊಬ್ಬಳು ಚೊಚ್ಚಲ ಪ್ರಯತ್ನದಲ್ಲಿಯೇ ಸೈ ಎನಿಸಿಕೊಂಡ ಬಾಲೆಯಾಗಿದ್ದು, ಪ್ರತಿಷ್ಠಿತ ಮಿಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಫೆ.20 ರಂದು ಮೂಡಬಿದ್ರೆಯ ಕನ್ನಡ ಭವನದಲ್ಲಿ ದೀಪಕ್ ಶೆಟ್ಟಿರವರು ಯೂನಿಕ್ ಫ್ಯಾಷನ್ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಕರ್ನಾಟಕ ರಾಜ್ಯ ಮಟ್ಟದ ಮಿಸ್ಟರ್, ಮಿಸ್, ಟೀಮ್ ಕರ್ನಾಟಕ ಸ್ಪರ್ಧೆಯ ಮಿಸ್ ವಿಭಾಗದಲ್ಲಿ ಕಿಂಜಲ್‌ರವರು ಪ್ರತಿಷ್ಠಿತ ಟೈಟಲ್ನ್ನು ತಮ್ಮದಾಗಿಸಿ ಫಿಲೋಮಿನಾ ಕಾಲೇಜಿಗೆ ಮಾತ್ರವಲ್ಲ, ಪುತ್ತೂರಿಗೂ ಹೆಸರು ತಂದಿರುತ್ತಾರೆ.
ಈ ಸ್ಪರ್ಧೆಯಲ್ಲಿನ ಅಂತಿಮ ಸುತ್ತಿನಲ್ಲಿ ನಾಲ್ಕು ಮಂದಿ ಸ್ಪರ್ಧಿಗಳಿದ್ದು, ಅಂತಿಮವಾಗಿ ಕಿಂಜಲ್‌ರವರು ಉಳಿದ ಮೂವರನ್ನು ಹಿಂದಿಕ್ಕಿ ತೀರ್ಪುಗಾರರ ಮೆಚ್ಚುಗೆ ಗಳಿಸಿ ಚಾಂಪಿಯನ್ ಆಗುವುದರೊಂದಿಗೆ ಸೌಂದರ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.