ಬೆಂಗಳೂರು: “ಹಿಜಾಬ್ ವಿವಾದದ ಕಾರಣಕ್ಕೆ ವಿದ್ಯಾರ್ಥಿಗಳು ಪಿಯು ಪರೀಕ್ಷೆಗಳಿಗೆ ಗೈರುಹಾಜರಾದರೆ ಅವರಿಗೆ ಮರುಪರೀಕ್ಷೆ ಇರುವುದಿಲ್ಲ. ಯಾರೂ ಕೂಡ ಹಠ ಮಾಡಿ ಶೈಕ್ಷಣಿಕ ಜೀವನ ಹಾಳು ಮಾಡಿಕೊಳ್ಳಬಾರದು,” ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನವಿ ಮಾಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ತೆಗೆದು ಪರೀಕ್ಷಾ ಕೇಂದ್ರಕ್ಕೆ ಬರಬೇಕು. “ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಕೆಲವರು ವಿರೋಧಿಸಿದ್ದಾರೆ.
ಅಂತಹವರ ಪರವಾಗಿ ಕಾಂಗ್ರೆಸ್‌ನವರು ಮಾತನಾಡುವುದು ಸರಿಯಲ್ಲ. ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಪಾಲಿಸಿ, ಶಾಲೆ, ಕಾಲೇಜು, ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ತೆಗೆದು ಬರಬೇಕು. ಹಿಜಾಬ್‌ಗಾಗಿ ಹಠ ಹಿಡಿದು ಕೂತರೆ ಇಡೀ ವರ್ಷದ ಶೈಕ್ಷಣಿಕ ಜೀವನ ವ್ಯರ್ಥವಾಗುತ್ತದೆ.