ಬಳ್ಳಾರಿ: ಪ್ರಮುಖ ಜಿಲ್ಲೆಗಳಾದ ಬಳ್ಳಾರಿ, ರಾಯಚೂರು, ಕೊಪ್ಪಳದ ಹಾಲು ಒಕ್ಕೂಟ ನಷ್ಟದತ್ತ ಸಾಗಿದೆ. ಸದ್ಯ ನಾಲ್ಕೂವರೆ ಕೋಟಿ ರೂಪಾಯಿ ನಷ್ಟದಲ್ಲಿರುವ ರಾಬಕೋ ಸಂಸ್ಥೆ ನಷ್ಟದಿಂದ ಹೊರಬರಲು ಹೊಸ ಯೋಜನೆಯೊಂದನ್ನು ಮಾಡಿದೆ. ತುಪ್ಪ ಮಾರಾಟ ಹೆಚ್ಚಳ ಮಾಡಲು ಸಿಬ್ಬಂದಿಗಳಿಗೆ ಹೊಸ ಟಾರ್ಗೆಟ್ ನೀಡಲಾಗಿದೆ. ಆದರೆ ಹೆಚ್ಚು ಹೆಚ್ಚು ತುಪ್ಪ(Ghee) ಮಾರಿ ಸಂಸ್ಥೆಗೆ ಲಾಭ ತರಬೇಕಾದ ಸಿಬ್ಬಂದಿಗಳಿಗೆ ಇದೀಗ ಕಡಿಮೆ ದರಕ್ಕೆ ಹೆಚ್ಚು ತುಪ್ಪ ಸಿಗುತ್ತಿರುವುದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ ಕೆಎಂಎಫ್ನ(KMF) ನಂದಿನಿ ತುಪ್ಪ ಅಂದರೆ ತಾಜಾ, ಪರಿಶುದ್ಧ ಸ್ವಾದಿಷ್ಠ ತುಪ್ಪ ಎನ್ನುವ ಮಾತಿದೆ. ನಂದಿನಿ ಎನ್ನುವ ಹೆಸರನ್ನೇ ಬಳಸಿ ಹಲವರು ನಕಲಿ ತುಪ್ಪ ಮಾರಾಟ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಹೀಗಿರುವಾಗಲೇ ಮತ್ತಷ್ಟು ತುಪ್ಪ ಮಾರಾಟವನ್ನು ಹೆಚ್ಚಳ ಮಾಡುವುದಕ್ಕೆ ಇದೀಗ ಕೆಎಂಎಫ್ ಸಂಸ್ಥೆ ಹೊಸ ಯೋಜನೆ ಮಾಡಿದೆ. ನಷ್ಟದ ಭೀತಿಯಲ್ಲಿರುವ ರಾಬಕೋ( Robako) ಒಕ್ಕೂಟವನ್ನು ಲಾಭದತ್ತ ತರಲು ಸಿಬ್ಬಂದಿಗಳಿಗೆ ತುಪ್ಪ ಮಾರಾಟ ಮಾಡುವ ಟಾರ್ಗೆಟ್ ನೀಡಿದೆ.
ಇದು ಬಳ್ಳಾರಿ, ರಾಯಚೂರು, ಕೊಪ್ಪಳ ಹಾಲು ಉತ್ಪಾದಕರ ಸಹಕಾರ ಸಂಘದ ಒಕ್ಕೂಟ. ರಾಬಕೋ ಎಂದೇ ಹೆಸರುವಾಸಿಯಾಗಿರುವ ಈ ಒಕ್ಕೂಟ ಇದೀಗ ನಷ್ಟದಲ್ಲಿದೆ. ಸದ್ಯ ನಾಲ್ಕುವರೆ ಕೋಟಿ ರೂಪಾಯಿ ನಷ್ಟದಲ್ಲಿರುವ ಒಕ್ಕೂಟ ಇತ್ತೀಚಿಗಷ್ಠೆ ಹಾಲು ಉತ್ಪಾದಕರಿಗೆ ಹಾಲಿನ ದರ ಕಡಿತಗೊಳಿಸಿ, ಒಕ್ಕೂಟವನ್ನು ಲಾಭಕ್ಕೆ ತರುವ ಪ್ರಯತ್ನ ಮಾಡಿತ್ತು. ಇದರ ಜೊತೆಗೆ ಇದೀಗ ನಂದಿನಿ ತುಪ್ಪ ಮಾರಾಟ ಮಾಡುವುದಕ್ಕೆ ಮತ್ತೊಂದು ಯೋಜನೆ ಮಾಡಿದೆ.