ಹೊಸದಿಲ್ಲಿ, ಜ. 27: ನೇತಾಜಿ ಸುಭಾಷ್ ಚಂದ್ರ ಭೋಸ್ ಅವರು ಜೀವಂತ ಇದ್ದಿದ್ದರೆ, ನರೇಂದ್ರ ಮೋದಿ ಸರಕಾರ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಕಟುವಾಗಿ ಟೀಕಿಸುತ್ತಿದ್ದರು ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮರಿ ಸೋದರಳಿಯ ಹಾಗೂ ಜೀವನಚರಿತ್ರೆಯ ಲೇಖಕ ಪ್ರೊ.
ಸುಗತಾ ಬೋಸ್ ಹೇಳಿದ್ದಾರೆ. ‘ದಿ ವೈರ್’ನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನೇತಾಜಿ ಅವರು ಜೀವಂತ ಇದ್ದಿದ್ದರೆ, ನರಮೇಧ ನಡೆಸುವಂತೆ ಕರೆ ನೀಡಲು ಯಾರೊಬ್ಬರಿಗೂ ಧೈರ್ಯ ಇರುತ್ತಿರಲಿಲ್ಲ ಎಂದಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಇತಿಹಾಸ ಪೀಠದ ಪ್ರಾಧ್ಯಾಪಕ ಹಾಗೂ ಕೋಲ್ಕತ್ತಾದ ನೇತಾಜಿ ಸಂಶೋಧನ ಬ್ಯೂರೊದ ಅಧ್ಯಕ್ಷರಾಗಿರುವ ಸುಗತಾ ಬೋಸ್, ನೇತಾಜಿ ಅವರಿಗೆ ತನ್ನ ಐಎನ್‌ಎಯಲ್ಲಿರುವ ಧಾರ್ಮಿಕ ಅಲ್ಪ ಸಂಖ್ಯಾತರ ಬಗ್ಗೆ ಅಪಾರ ನಂಬಿಕೆ ಇತ್ತು. ಧಾರ್ಮಿಕ ಅಲ್ಪಸಂಖ್ಯಾತರಿಗೆ ವಿಶೇಷ ಪ್ರಾಮುಖ್ಯತೆಯನ್ನು ನೇತಾಜಿ ಅವರು ನೀಡಿದ್ದರು ಎಂದಿದ್ದಾರೆ. 2014ರಿಂದ 2019ರ ವರೆಗೆ ತೃಣಮೂಲ ಕಾಂಗ್ರೆಸ್ನ ಲೋಕ ಸಭಾ ಸದಸ್ಯರಾಗಿದ್ದ ಬೋಸ್ ಅವರು, ಮಹಾತ್ಮಾ ಗಾಂಧಿ ಅವರು ಭೇಟಿ ಆಗುವುದಕ್ಕಿಂತ 7 ವರ್ಷ ಹಿಂದೆ, ಅಂದರೆ, 1940ರಲ್ಲಿ ನೇತಾಜಿ ಅವರು ಮುಹಮ್ಮದ್ ಅಲಿ ಜಿನ್ನ ಅವರನ್ನು ಭೇಟಿಯಾಗಿದ್ದರು.
ಅಲ್ಲದೆ, ಕಾಂಗ್ರೆಸ್ ಸೇರುವಂತೆ ಅವರನ್ನು ವಿನಂತಿಸಿದ್ದರು. ಒಂದು ವೇಳೆ ಅವರು ಕಾಂಗ್ರೆಸ್ ಸೇರಿದ್ದರೆ, ಜಿನ್ನಾ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗುತ್ತಿದ್ದರು. 1947ರಲ್ಲಿ ಗಾಂಧೀಜಿ ಕೂಡ ಕೊನೆಯ ಬ್ರಿಟಿಷ್ ವೈಸರಾಯಿ ಲಾರ್ಡ್ ವೌಂಟ್ಬೇಟನ್ಗೆ ಇದೇ ರೀತಿಯ ಸಲಹೆ ನೀಡಿದ್ದರು. ನೇತಾಜಿ ಅವರು ತನ್ನ ಪುಸ್ತಕ ‘ದಿ ಇಂಡಿಯನ್ ಸ್ಟ್ರಗಲ್’ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.