ಬೆಳಗಾವಿ: ಸೈನಿಕ ಶಾಲೆ ಪ್ರವೇಶಕ್ಕೆ ಭಾನುವಾರ (ಜ.9) ನಡೆದ ಪರೀಕ್ಷೆಯಲ್ಲಿ ಗೋಲ್ಮಾಲ್ ನಡೆದಿದೆ ಎಂದು ಹಲವು ಪೋಷಕರು ದೂರಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿಯೊಬ್ಬರ ಪುತ್ರಿಯೂ ಸೇರಿದಂತೆ ಇತರ ಸರ್ಕಾರಿ ನೌಕರರ ಐವರು ಮಕ್ಕಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಅವಧಿಗೂ ಮುನ್ನವೇ ಪ್ರಶ್ನಪತ್ರಿಕೆ ನೀಡಲಾಗಿತ್ತು ಎಂದು ಪೋಷಕರು ಪರೀಕ್ಷಾ ಕೇಂದ್ರ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಖಾಸಗಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯ ಜೈನ್ ಹೆರಿಟೇಜ್ ಶಾಲೆಯಲ್ಲಿ ಪ್ರವೇಶ ಪರೀಕ್ಷೆ ನಡೆಯುತ್ತಿದ್ದಾಗಲೇ ಕೆಲ ಪೋಷಕರು ಪ್ರತಿಭಟನೆ ನಡೆಸಿ, ಶಾಲಾ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಡಾ ಆಡಳಿತಾಧಿಕಾರಿ ಶಶಿಧರ್ ಕುರೇರ್ ಅವರ ಪುತ್ರಿ ಸೇರಿ ಐವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ದೂರಿ, ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು. ಈ ಆರೋಪಗಳನ್ನು ಕೆಎಎಸ್ ಅಧಿಕಾರಿ ಶಶಿಧರ್ ಕುರೇರ್ ತಳ್ಳಿಹಾಕಿದರು.