ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಎಸ್ ಎಂ ಗೊಲ್ಲಹಳ್ಳಿಯಲ್ಲಿಯಲ್ಲೊಂದು ನಿನ್ನೆ ದೊಡ್ಡ ದುರಂತ ನಡೆದಿತ್ತು. ಮಹಿಳೆಯೊಬ್ಬರು ತನ್ನಿಬ್ಬರು ಪುಟಾಣಿ ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರು.
ತಾಯಿ ಸಂಧ್ಯಾ (33) ಮತ್ತು ಆಕೆಯ 4 ಹಾಗೂ 2 ವರ್ಷದ ಮಕ್ಕಳು ಮೃತಪಟ್ಟಿದ್ದಾರೆ. ಸಂಧ್ಯಾ ಅವರ ವಿವಾಹವು ಶ್ರೀಕಾಂತ ಎನ್ನುವವರ ಜತೆ ಐದು ವರ್ಷಗಳ ಹಿಂದೆ ನಡೆದಿದೆ. ಅತ್ತೆ-ಮಾವನ ಜತೆ ಸಂಧ್ಯಾ ನೆಲೆಸಿದ್ದರು. ಈ ತಾಯಿ ಇಂಥದ್ದೊಂದು ಕಠೋರ ನಿರ್ಧಾರ ತೆಗೆದುಕೊಂಡು ಇಬ್ಬರು ಕರುಳಕುಡಿಗಳನ್ನೂ ಜೀವಂತವಾಗಿ ಸುಟ್ಟುಹಾಕಿದ್ದಾಳೆ. ಐದು ಲೀಟರ್ ಪೆಟ್ರೋಲ್ ಖರೀದಿಸಿ ಎಲ್ಲರ ಮೈಮೇಲೂ ಅದನ್ನು ಸುರಿದು ಬೆಂಕಿ ಹಚ್ಚಿಕೊಂಡಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ. ಘಟನೆ ವೇಳೆ ತನ್ನಿಬ್ಬರು ಮಕ್ಕಳನ್ನು ಆಕೆ ಬಿಗಿಯಾಗಿ ಅಪ್ಪಿ ಹಿಡಿದುಕೊಂಡಿದ್ದಳು.
ಸ್ಥಳೀಯರು ಹೇಳುವ ಪ್ರಕಾರ ಕುಟುಂಬದಲ್ಲಿ ಯಾವುದೇ ಮನಸ್ತಾಪ ಇರಲಿಲ್ಲ. ಎಲ್ಲರೂ ಅನ್ಯೋನ್ಯವಾಗಿದ್ದರು ಎಂದಿದ್ದರು. ಆದ್ದರಿಂದ ಈ ಆತ್ಮಹತ್ಯೆಯ ಹಿಂದಿನ ಕಾರಣ ನಿಗೂಢವಾಗಿತ್ತು.
ಅದನ್ನೀಗ ಪೊಲೀಸರು ಭೇದಿಸಿದ್ದಾರೆ. ಸಂಧ್ಯಾ ಅವರು ಹುಟ್ಟಿ ಬೆಳೆದಿದ್ದು ಪಟ್ಟಣದಲ್ಲಿ. ಬೆಂಗಳೂರಿನ ಯಲಹಂಕದಲ್ಲಿ ಅವರು ಬೆಳೆದದ್ದು. ಅವರಿಗೆ ವಾರಕ್ಕೊಮ್ಮೆಯಾದರೂ ಹೊರಗಡೆ ಸುತ್ತಾಡಿ ಮಕ್ಕಳ ಜತೆಯಲ್ಲಿ ಹೋಟೆಲ್‌ನಲ್ಲಿ ತಿನ್ನುವ ಆಸೆ. ಆದರೆ ಹಳ್ಳಿಯಲ್ಲಿ ಹುಟ್ಟಿದ್ದ ಗಂಡನಿಗೆ ಇದು ಇಷ್ಟವಿರಲಿಲ್ಲ. ಮನೆಯಲ್ಲಿಯೇ ಚೆನ್ನಾಗಿ ತಿನ್ನುವ ಬದಲು ಹೊರಗಡೆ ಆಹಾರ ಏಕೆ ಎಂದು ಕೇಳುತ್ತಿದ್ದರು. ಇದರಿಂದ ಸಂಧ್ಯಾ ತುಂಬಾ ನೊಂದುಕೊಂಡಿದ್ದರು ಎನ್ನಲಾಗಿದೆ.
ಹೋಟೆಲ್‌ಗೆ ಕರೆದುಕೊಂಡು ಹೋಗುವಂತೆ ಗಂಡನಿಗೆ ಸಂಧ್ಯಾ ನಿತ್ಯವೂ ಹೇಳುತ್ತಿದ್ದರು. ತವರು ಮನೆಯಲ್ಲಿ ಇರುವಾಗ ವಾರಕ್ಕೆ ಎರಡು ಬಾರಿಯಾದರೂ ಹೋಟೆಲ್‌ಗೆ ಹೋಗುತ್ತಿದ್ದರು. ಆದರೆ ಗಂಡ ಅದನ್ನು ಒಪ್ಪುತ್ತಿಲ್ಲ ಎಂದು ಸಂಧ್ಯಾ ಅಮ್ಮನ ಬಳಿ ಕೂಡ ನೋವು ತೋಡಿಕೊಂಡಿದ್ದರು. ತನ್ನ ಜೀವನ ಇಷ್ಟೇ ಆಗಿಹೋಯ್ತು. ತನ್ನ ಆಸೆ ಈಡೇರುವುದೇ ಇಲ್ಲ ಎಂದು ನೊಂದುಕೊಂಡ ಸಂಧ್ಯಾ ಜೀವನವೇ ಬೇಡ ಎಂದುಕೊಂಡು ಇಬ್ಬರು ಮಕ್ಕಳ ಜತೆ ಪೆಟ್ರೋಲ್ ಸುರಿದಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಈಗ ತಿಳಿದುಬಂದಿದೆ.