ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ತಾರೆಯರ ನಡುವೆ ಮತ್ತೆ ಯುದ್ಧ ಶುರುವಾಯ್ತಾ? ಇಬ್ಬರು ನಟರ ನಡುವೆ ಕಿತ್ತಾಟ ಆರಂಭ ಆಗಿದೆಯಾ? ಇಂಥದ್ದೊಂದು ಪ್ರಶ್ನೆ ಮೂಡಲು ಕಾರಣ ಒಂದು ವಿಡಿಯೋ. ಶಿವಣ್ಣ ಹಾಗೂ ರಾಜ್ ಬಿ ಶೆಟ್ಟಿ ನಡುವೆ ನಡೆದ ಒಂದು ಸಂಭಾಷಣೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಶಿವರಾಜ್‌ಕುಮಾರ್ ರೌದ್ರಾವತಾರ ತಾಳಿದ್ದು, ಒಂದು ಮೊಟ್ಟೆಯ ಕಥೆ ಸಿನಿಮಾ ನಾಯಕನಿಗೆ ಅವಾಜ್ ಹಾಕಿದ್ದಾರೆ.
ಶಿವಣ್ಣ ಎಷ್ಟು ಆರಾಮಾಗಿರುತ್ತಾರೋ ಅಷ್ಟೇ ಖಡಕ್ ವ್ಯಕ್ತಿತ್ವ. ಕೋಪ ಬಂತು ಅಂದರೆ, ಭಜರಂಗಿ ಮುಂದೆ ನಿಲ್ಲುವುದಕ್ಕೆ ಡಬಲ್ ಗುಂಡಿಗೆ ಬೇಕು. ಅಷ್ಟಕ್ಕೂ ರಾಜ್ ಬಿ ಶೆಟ್ಟಿಗೆ ಶಿವರಾಜ್‌ಕುಮಾರ್ ಅವಾಜ್ ಹಾಕಿದ್ದು ಏಕೆ? ಇಬ್ಬರ ನಡುವೆ ನಡೆದ ಗಲಾಟೆ ನಡೆದಿದೆಯಾ? ರಾಜ್ ಬಿ ಶೆಟ್ಟಿ ‘ಓಂ’ ಬಗ್ಗೆ ಹೇಳಿದ್ದು ಏನು? ಅಷ್ಟಕ್ಕೂ ಶಿವಣ್ಣ ಹಾಗೂ ರಾಜ್ ಬಿ ಶೆಟ್ಟಿ ನಡುವಿನ ಸಂಭಾಷಣೆ ಹೇಗಿದೆ ನೋಡಿ.
ನೀನೇನು ದೊಡ್ಡ ಡಾನ್? ಶಿವಣ್ಣ ಅವಾಜ್
ಶಿವಣ್ಣ: ಹಲೋ..
ರಾಜ್ ಬಿ ಶೆಟ್ಟಿ: ಯಾರು?
ಶಿವಣ್ಣ: ನೀನೇನು ಮಂಗಳಾದೇವಿಗೆ ದೊಡ್ಡ ಡಾನಾ?
ರಾಜ್ ಬಿ ಶೆಟ್ಟಿ: ಯಾರು.. ಯಾರು.. ನೀವು ಯಾರು ಮಾತಾಡೋದು?
ಶಿವಣ್ಣ: ಮಂಗಳಾದೇವಿಗೆ ನೀವೇನು ದೊಡ್ಡ ಡಾನಾ? ಅಲ್ಲೇ ಬರಲಾ? ನಾ.. ನೀನಾ ಅಂತ ನೋಡೇ ಬಿಡೋಣ.
ರಾಜ್ ಬಿ ಶೆಟ್ಟಿ: ಬರ್ತಿರಾ ಈಗ.. ಬಸ್‌ನಲ್ಲಿ ಬರುವುದಾ ಎಂತ?
ಶಿವಣ್ಣ: ನೀವು ಹೇಳಿ.. ಅಲ್ಲಿಗೆ ಬರಬೇಕಾ ಹೇಳಿ
ರಾಜ್ ಬಿ ಶೆಟ್ಟಿ: ಅಲ್ಲಾ ಬನ್ನಿ ಪರ್ವಾಗಿಲ್ಲ.
ಶಿವಣ್ಣ: ಅಲ್ಲಾ ಬರ್ತಿನಿ. ಬಂದ್ಮೇಲೆ ಮೀನು ಊಟ ಮಾಡೋಣ. ನೀವೇನು ದೊಡ್ಡ ಡಾನಾ ಅಲ್ಲಿ?
ರಾಜ್ ಬಿ ಶೆಟ್ಟಿ: ಹಾಗಲ್ಲಾ.. ನಾ..ನಾ..ನಾ.. ನೀವು ಯಾರು ಹೇಳಿ?
ಇದು ಭಜರಂಗಿ ಶಿವಣ್ಣ ಹಾಗೂ ರಾಜ್ ಬಿ ಶೆಟ್ಟಿ ನಡುವಿನ ಪವರ್‌ಫುಲ್ ಸಂಭಾಷಣೆ. ಹಾಗಂತ ರಾಜ್ ಬಿ ಶೆಟ್ಟಿ ಮೇಲೆ ಶಿವಣ್ಣ ಕೋಪಗೊಂಡು ಆಡಿದ ಮಾತುಗಳು ಅಂತ ಅಂದುಕೊಳ್ಳಬೇಡಿ. ಇದು ರಾಜ್ ಬಿ ಶೆಟ್ಟಿಗೆ ಶಿವಣ್ಣ ಫೂಲ್ ಮಾಡಿದ ದೃಶ್ಯ. ಶಿವಣ್ಣನೇ ಮಾತಾಡ್ತಿರೋದು ಅಂತ ಗೊತ್ತಾದ್ಮೇಲೆ ರಾಜ್ ಬಿ ಶೆಟ್ಟಿ ರಿಯಾಕ್ಷನ್ ಸರ್ಪ್ರೈಸಿಂಗ್ ಆಗಿತ್ತು.
ಶಿವಣ್ಣ ನೀವೇ ದೊಡ್ಡ ಡಾನ್ ಎಂದ ರಾಜ್
ರಾಜ್ ಬಿ ಶೆಟ್ಟಿ: ಯಾರು ನೀವು?
ಶಿವಣ್ಣ: ನಾನು ಭಜರಂಗಿ..
ರಾಜ್ ಬಿ ಶೆಟ್ಟಿ: ಓಹೋ.. ನೀವೆ ಅಲ್ಲವಾ ಡಾನ್.. ‘ಓಂ’ ಮಾಡಿದ್ದು ನೀವೆ ಅಲ್ಲವಾ? ಶಿವಣ್ಣ. ನೀವು ‘ಓಂ’ ಮಾಡಿದ ಮೇಲೆ ನಾನು ಗರುಡ ಗಮನ ಮಾಡಿದ್ದು. ಹಾಗಾಗಿ ದೊಡ್ಡ ಡಾನ್ ನೀವೇ.
ಶಿವಣ್ಣನೇ ಮಾತಾಡುತ್ತಿದ್ದಾರೆ ಅಂತ ಗೊತ್ತಾಗುತ್ತಿದ್ದಂತೆ ರಾಜ್ ಬಿ ಶೆಟ್ಟಿ ಅಚ್ಚರಿಗೊಂಡಿದ್ದರು. ನೀವು ‘ಓಂ’ ಮಾಡಿದ ಬಳಿಕವಷ್ಟೇ ನಾವು ಗರುಡ ಗಮನ ಸಿನಿಮಾ ಮಾಡಿದ್ದು ಅಂತ ಹೇಳಿದ್ದಾರೆ. ಇವರಿಬ್ಬರ ಈ ಸಂಭಾಷಣೆ ಜೀ 5 ಪ್ರಚಾರದ ಒಂದು ವಿಡಿಯೋ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ.
ಜೀ 5ನಲ್ಲಿ ‘ಗರುಡ ಗಮನ ವೃಷಭ ವಾಹನ’
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಜೋಡಿಯ ಸಿನಿಮಾ ‘ಭಜರಂಗಿ 2’ ಈಗಾಗಲೇ ಜೀ5 ಓಟಿಟಿಯಲ್ಲಿ ರಿಲೀಸ್ ಆಗಿದೆ. ನಾಲ್ಕೇ ದಿನಕ್ಕೆ 5 ಕೋಟಿಗೂ ಅಧಿಕ ನಿಮಿಷಗಳನ್ನು ವೀವ್ಸ್ ಟೈಮ್ ಸಿಕ್ಕಿದೆ. ‘ಭಜರಂಗಿ 2’ ಓಟಿಟಿ ರಿಲೀಸ್ ಹಿಂದೆನೇ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಕನ್ನಡಿಗ’ ಸಿನಿಮಾ ಕೂಡ ಬಿಡುಗಡೆಯಾಗಿತ್ತು. ಇದೀಗ ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿಯ ಸೂಪರ್ ಹಿಟ್ ಸಿನಿಮಾ ‘ಗರುಡ ಗಮನ ವೃಷಭ ವಾಹನ’ ಜೀ5 ಓಟಿಟಿಗೆ ಎಂಟ್ರಿ ಕೊಡಲಿದೆ.
ಜನವರಿ 13ಕ್ಕೆ ‘ಗರುಡ ಗಮನ ವೃಷಭ ವಾಹನ’
ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಕಾಂಬಿನೇಷನ್‌ಗೆ ಸಿನಿಪ್ರಿಯರು ಉಘೇ ಎಂದಿದ್ದರು. ನವೆಂಬರ್ 19ರಂದು ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದ ಸಿನಿಮಾವನ್ನು ಜನರು ಮೆಚ್ಚಿ ಕೊಂಡಾಡಿದ್ದರು. ಈ ಸಿನಿಮಾದ ಹಕ್ಕುಗಳನ್ನು ಜೀ 5 ಸಂಸ್ಥೆ ಪಡೆದುಕೊಂಡಿತ್ತು. ಒಪ್ಪಂದ ಪ್ರಕಾರ, ‘ಗರುಡ ಗಮನ ವೃಷಭ ವಾಹನ’ ಸಂಕ್ರಾಂತಿ ಹಬ್ಬದ ಸಂಭ್ರಮ ವೇಳೆ ಅಂದರೆ, ಜನವರಿ 13ರಂದು ಜೀ5 ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಸಿನಿಮಾ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆಯಾಗಿದ್ದು, ಪ್ರಚಾರಕ್ಕೆ ಸಾಥ್ ನೀಡಿದ್ದಾರೆ.