ಹಮ್ ಆಪ್ ಕೇ ಹೈ ಕೋನ್’ ಸಿನಿಮಾ ಹಿಂದಿ ಚಿತ್ರರಂಗದ ಸೂಪರ್-ಡೂಪರ್ ಹಿಟ್ ಸಿನಿಮಾಗಳಲ್ಲಿ ಒಂದು.
14 ಹಾಡುಗಳಿದ್ದ ‘ಹಮ್ ಆಪ್ಕೆ ಹೈ ಕೋನ್’ ಸಿನಿಮಾ ವರ್ಷಗಳ ಕಾಲ ಚಿತ್ರಮಂದರಿಗಳಲ್ಲಿ ಓಡಿತ್ತು, ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ದಾಖಲೆಯನ್ನು ಬಹು ಸಮಯ ಹೊಂದಿತ್ತು.
ನಂತರ ಅದನ್ನು ಡಿಡಿಎಲ್‌ಜೆ ಮುರಿಯಿತು. ಈ ಸಿನಿಮಾದಲ್ಲಿ ನಟಿಸಿದ್ದ ಎಲ್ಲ ನಟ-ನಟಿಯರೂ ಆ ನಂತರ ಹಲವು ಸಿನಿಮಾಗಳಲ್ಲಿ ಬ್ಯುಸಿಯಾದರು.
‘ಹಮ್ ಆಪ್ಕೆ ಹೈ ಕೋನ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತ್ತಿಗೆಯ ಪಾತ್ರದಲ್ಲಿ ನಟಿಸಿದ್ದ ನಟಿ ರೇಣುಕಾ ಸಹಾನೆ, ಮಾಧುರಿ ದೀಕ್ಷಿತ್ ಅಷ್ಟೇ ಗಮನ ಸೆಳೆದಿದ್ದರು. ಆದರೆ ಆ ನಂತರ ಅವರು ಬಹಳಷ್ಟು ಸಿನಿಮಾಗಳಲ್ಲಿ ನಟಿಸಲಿಲ್ಲ.
ಈ ಬಗ್ಗೆ ಮಾತನಾಡಿರುವ ರೇಣುಕಾ ಸಹಾನೆ, ‘ಹಮ್ ಆಪ್ಕೆ ಹೈ ಕೋನ್’ ಸಿನಿಮಾದ ಬಳಿಕ ಸಾಕಷ್ಟು ಅವಕಾಶಗಳು ಬಂದವು. ಆದರೆ ಬಹುತೇಕ ಎಲ್ಲರೂ ಅತ್ತಿಗೆ ಪಾತ್ರ, ನಾಯಕನ ತಂಗಿಯ ಪಾತ್ರಗಳನ್ನೇ ಆಫರ್ ಮಾಡುತ್ತಿದ್ದರು ಎಂದಿದ್ದಾರೆ.
ಪಾತ್ರ ನೀಡಲು ಬರುತ್ತಿದ್ದ ನಿರ್ದೇಶಕರು, ‘ನಿಮ್ಮ ಪಾತ್ರ ಕತೆಗೆ ಮುಖ್ಯ ತಿರುವು ನೀಡುವಂಥಹದ್ದು. ನಿಮ್ಮ ಮೇಲೆ ರೇಪ್ ಆಗುತ್ತದೆ, ಅದರಿಂದ ನಾಯಕ ಆಕ್ರೋಶಗೊಂಡು ದ್ವೇಷ ತೀರಿಸಿಕೊಳ್ಳುತ್ತಾನೆ” ಎನ್ನುತ್ತಿದ್ದರು. ಇಂಥಹಾ ರೇಪ್ ಪಾತ್ರಗಳಲ್ಲಿ ನಟಿಸಲು ಇಷ್ಟವಿಲ್ಲದೆ ನಾನು ಪಾತ್ರಗಳನ್ನು ಬೇಡ ಎನ್ನುತ್ತಿದ್ದೆ” ಎಂದು ನೆನಪು ಮಾಡಿಕೊಂಡಿದ್ದಾರೆ ರೇಣುಕಾ ಸಹಾನೆ.
”ರೇಪ್ ದೃಶ್ಯಗಳಲ್ಲಿ ನಟಿಸುವುದು ಬಹಳ ಮುಜುಗರದ ಕೆಲಸ. ಅದರಲ್ಲಿಯೂ ಆ ನಾಯಕನ ತಂಗಿ, ಈ ನಾಯಕನ ತಂಗಿ ಎಂದು ನಿರ್ದೇಶಕರು ಹೇಳುವಾಗ ಇನ್ನಷ್ಟು ಬೇಸರವಾಗುತ್ತಿತ್ತು. ಇನ್ನು ಕೆಲವರು ಬಂದು ಎಲ್ಲವನ್ನೂ ಸಹಿಸಿಕೊಳ್ಳುವ ಅತ್ತಿಗೆ ಪಾತ್ರ ನೀಡುತ್ತಿದ್ದರು. ಅಂಥಹಾ ಪಾತ್ರಗಳು ಸಹ ಬೇಸರ ತರಿಸುತ್ತಿದ್ದವು ಹಾಗಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ” ಎಂದಿದ್ದಾರೆ ರೇಣುಕಾ ಸಹಾನೆ.
ಸಿನಿಮಾಕ್ಕಿಂತಲೂ ಧಾರಾವಾಹಿಗಳು, ಟಿವಿ ಶೋಗಳಲ್ಲಿ ಹೆಚ್ಚಿಗೆ ಕಾಣಿಸಿಕೊಂಡರು ರೇಣುಕಾ ಸಹಾನೆ. ಶಾರುಖ್ ಖಾನ್ ನಟಿಸಿದ್ದ ಎರಡನೇ ಧಾರಾವಾಹಿ ‘ಸರ್ಕಸ್’ನಲ್ಲಿ ರೇಣುಕಾ ಸಹಾನೆ ನಟಿಸಿದ್ದರು. 1993 ರಲ್ಲಿ ಪ್ರಾರಂಭವಾದ ‘ಸುರಭಿ’ ಕಾರ್ಯಕ್ರಮದ ನಿರೂಪಣೆ ಮಾಡಿದ್ದು ಬಹಳ ದೊಡ್ಡ ಜನಪ್ರಿಯತೆಯನ್ನು ರೇಣುಕಾ ಅವರಿಗೆ ತಂದುಕೊಟ್ಟಿತು. ನಂತರ ಹಲವು ಹಿಂದಿ ಹಾಗೂ ಮರಾಠಿ ಧಾರಾವಾಹಿಗಳು, ಕಾಮಿಡಿ ಶೋಗಳಲ್ಲಿ ರೇಣುಕಾ ನಟಿಸಿದರು.
2021 ರಲ್ಲಿ ನಿರ್ದೇಶಕಿಯೂ ಆದ ರೇಣುಕಾ ಸಹಾನೆ, ಕಾಜಲ್ ಮುಖ್ಯಪಾತ್ರದಲ್ಲಿ ನಟಿಸಿರುವ ‘ತ್ರಿಭಂಗ್’ ಸಿನಿಮಾವನ್ನು ನಿರ್ದೇಶನ ಮಾಡಿದರು. ಈ ಸಿನಿಮಾ ವಿಮರ್ಶಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತು.