ಬೆಂಗಳೂರು: ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳ ಜೊತೆಗೆ ನಡೆಯುತ್ತಿರುವ ಸಭೆಯಲ್ಲಿ ಸಿಎಂ ಬೊಮ್ಮಾಯಿ ಜಿಲ್ಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಜೊತೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳು, ಒಮಿಕ್ರಾನ್ ತಡೆಗೆ ಪೂರ್ವಸಿದ್ಧತೆ, ರೈತ ವಿದ್ಯಾ ಸಿರಿ ಯೋಜನೆ, ವಿಶೇಷಚೇತನರ ಮಾಸಾಶನ ಯೋಜನೆ, ನೆರೆ ಪರಿಹಾರ ವಿತರಣೆ, ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸುತ್ತಿರುವ ಸಿಎಂ, ನೀವು ಜನರ ಸೇವೆ ಮಾಡುವ ಸಾರ್ವಜನಿಕ ಸೇವಾಧಿಕಾರಿಗಳು. ಬಾಸಿಸಂ (Bossism) ಬಿಟ್ಟು ಜನರ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ನೀವು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೌದು. ಆದರೆ, ಫೀಲ್ಡಿನಲ್ಲೂ ಅದೇ ರೀತಿ ಕೆಲಸ ಮಾಡಬೇಡಿ. ಜನರ ನಡುವೆ ಹೋಗಿ ಜನರ ಜೊತೆ ಕೆಲಸ ಮಾಡಿ. ಕೆಳಹಂತದ ಅಧಿಕಾರಿಗಳು ನಿಮ್ಮಂತೆಯೇ ವರ್ತಿಸಲು ಅವಕಾಶ ಕೊಡಬೇಡಿ. ನಿಮ್ಮ ಸ್ವಂತಿಕೆ, ವಿವೇಚನೆ ಬಳಸಿ ಕೆಲಸ ಮಾಡಿ. ಅಧಿಕಾರ ನಿಮ್ಮಲ್ಲಿ ಇನ್ನಷ್ಟು ಮೃದುತ್ವ, ವಿನಯತೆ ತರಬೇಕು. ಹಾಗಾಗಿ, ಎಚ್ಚರಿಕೆಯಿಂದ ಆಡಳಿತ ಕೆಲಸ ಮಾಡಿ ಎಂದು ಸಲಹೆ ನೀಡಿದರು.