ಬೆಂಗಳೂರು:ಎಂಇಎಸ್ ರಾಜಕೀಯ ಪಕ್ಷ ಕನ್ನಡದ್ರೋಹಿಯಾಗಿದ್ದು, ಅದನ್ನು ಬ್ಯಾನ್ ಮಾಡಬೇಕು ಎಂಬ ಏಕಂಶ ಬೇಡಿಕೆ ಮುಂದಿಟ್ಟುಕೊಂಡು ವರ್ಷಾಂತ್ಯ ಇಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಬಂದ್ಗೆ ಕರೆನೀಡಿದ್ದರು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಸರ್ವರೂ ಒಕ್ಕೊರಲಿಂದ ತಮ್ಮ ತಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗಿ ಬಂದ್ ಬೇಡ ಎಂದು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಸ್ಪಂದಿಸಿರುವ ವಾಟಾಳ್ ಇಂದು ಬಂದ್ ಆಚರಿಸುತ್ತಿಲ್ಲ. ಬದಲಿಗೆ ಇಂದಿನ ಕರ್ನಾಟಕ ಬಂದ್ ಮುಂದೂಡಿಕೆ ಹಿನ್ನೆಲೆ ವಾಟಾಳ್ & ಟೀಂ ಬೃಹತ್ ಪ್ರತಿಭಟನೆಗೆ ಮುಂದಾಗಿದೆ.
ವಿವಿಧ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. ಎಂಇಎಸ್ ನಿಷೇಧಗೊಳಿಸುವಂತೆ ಒತ್ತಾಯಿಸಿ ಇಂದು ಬೆಳಗ್ಗೆ 11 ಗಂಟೆಗೆ ಪ್ರೊಟೆಸ್ಟ್ ಆರಂಭವಾಗಲಿದೆ. ನಿನ್ನೆ ಸಿಎಂ ಜೊತೆಗಿನ ಸಂಧಾನ ಸಭೆ ಸಕ್ಸಸ್ ಆದ ಬಳಿಕ ಬಂದ್ ದಿನಾಂಕ ಮುಂದೂಡಿಕೆಗೆ ವಾಟಾಳ್ ಒಪ್ಪಿದ್ದರು. ಅದರಂತೆ ಈಗ ಎಂಇಎಸ್ ಬ್ಯಾನ್ ಗೆ ಜನವರಿ 20ರವರೆಗೆ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದಾರೆ. ಒಂದು ವೇಳೆ ಬ್ಯಾನ್ ಮಾಡದಿದ್ದರೆ ಮತ್ತೆ ಬಂದ್ ಗೆ ಕರೆ ನೀಡಲಿದ್ದು, ಜನವರಿ 22ರಂದು (January 22 2022 – ಶನಿವಾರ) ಕರ್ನಾಟಕ ಬಂದ್ ಗೆ ಕರೆ ನೀಡುವುದಾಗಿ ವಾಟಾಳ್ ನಾಗರಾಜ್ ರಾಜ್ಯ ಸರ್ಕಾಕ್ಕೆ ಎಚ್ಚರಿಕೆ ನೀಡಿದ್ದಾರೆ.