Breaking News

ಬಿಟ್ ಕಾಯಿನ್ ಹಗರಣಕ್ಕೆ ಪೊಲೀಸ್ ಕಮಿಷನರ್ ಇತಿಶ್ರೀ

Spread the love

ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಿಟ್ ಕಾಯಿನ್ ಹಗರಣಕ್ಕೆ ಬೆಂಗಳೂರು ಪೊಲೀಸರು ಇತಿ’ಶ್ರೀ’ ಹಾಡುವ ನಿಟ್ಟಿನಲ್ಲಿ 1 ವರ್ಷದಿಂದ ನಡೆದಿರುವ ತನಿಖಾ ವಿವರ ಒಳಗೊಂಡಿರುವ 4 ಪುಟಗಳ ಮಾಧ್ಯಮ ಪ್ರಕಟಣೆಯನ್ನು ಶನಿವಾರ ಬಿಡುಗಡೆ ಮಾಡಿದ್ದಾರೆ.

ಹ್ಯಾಕರ್ ಶ್ರೀಕಿ ಖಾತೆಯಿಂದ ಯಾವುದೇ ಬಿಟ್ ಕಾಯಿನ್ ವರ್ಗಾವಣೆ ಆಗಿಲ್ಲ. ಯಾವುದೇ ಬಿಟ್ ಕಾಯಿನ್ ಕಳವೂ ಆಗಿಲ್ಲ. ಪ್ರಕರಣ ಬಹಿರಂಗವಾಗಿ ಒಂದು ವರ್ಷ ಕಳೆದ ನಂತರ ಈಗ ನಿರಾಧಾರ ಹಾಗೂ ಸತ್ಯಕ್ಕೆ ದೂರವಾದ ಅಪವಾದ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಪೊಲೀಸರ ಸ್ಪಷ್ಟನೆ ಏನು?: 2020ರ ನ.4ರಂದು ಖಚಿತ ಮಾಹಿತಿ ಮೇರೆಗೆ ಡಾರ್ಕ್ ನೆಟ್​ನಲ್ಲಿ ಡ್ರಗ್ಸ್ ಖರೀದಿಸಿದ್ದ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ, 500 ಗ್ರಾಂ ಹೈಡ್ರೋ ಗಾಂಜಾ ಜಪ್ತಿ ಮಾಡಲಾಯಿತು. ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದಾಗ ಹ್ಯಾಕರ್ ಶ್ರೀಕಿ ಸೇರಿ 10 ಆರೋಪಿ ಬಂಧಿಸಲಾಯಿತು. ವಿಚಾರಣೆ ಸಂದರ್ಭದಲ್ಲಿ ಶ್ರೀಕಿ ತನಿಖಾಧಿಕಾರಿ ಮುಂದೆ ತಾನು ಹಲವು ಕ್ರಿಪ್ಟೋ ಕರೆನ್ಸಿ ವೆಬ್​ಸೈಟ್​ಗಳ ಹ್ಯಾಕಿಂಗ್​ನಲ್ಲಿ ಪಾತ್ರವಿರುವ ಬಗ್ಗೆ ತಪ್ಪೊಪ್ಪಿಕೊಂಡ. ಈ ಹಿನ್ನೆಲೆಯಲ್ಲಿ ಕಾಟನ್​ಪೇಟೆ ಠಾಣೆಯಲ್ಲಿ ಪ್ರತ್ಯೇಕ ಎಫ್​ಐಆರ್ ದಾಖಲಿಸಲಾಯಿತು.

ಶ್ರೀಕಿ ಖಾತೆಯಿಂದ ಯಾವುದೇ ಬಿಟ್ ಕಾಯಿನ್​ಗಳನ್ನು ವರ್ಗಾಯಿಸಿಲ್ಲ ಹಾಗೂ ಯಾವುದೇ ಬಿಟ್ ಕಾಯಿನ್ ಕಳವು ಆಗಿಲ್ಲ. ವಾಸ್ತವದ ಸಂಗತಿ ಏನೆಂದರೆ ಕ್ರಿಪ್ಟೋ ಕರೆನ್ಸಿ ಪ್ರಕರಣದ ತನಿಖೆಗಾಗಿ ಬಿಟ್ ಕಾಯಿನ್ ಖಾತೆ ತೆರೆಯಬೇಕಾದ ಅಗತ್ಯತೆ ಇತ್ತು. ಈ ಬಗ್ಗೆ ಸರ್ಕಾರದ ಜತೆ ಮಾಹಿತಿ ಹಂಚಿಕೊಂಡಾಗ 2020ರ ಡಿ.8ರಂದು ಬಿಟ್ ಕಾಯಿನ್ ಖಾತೆ ತೆರೆಯಲು ಸರ್ಕಾರ ಅನುಮತಿ ನೀಡಿತು. ಬಿಟ್ ಕಾಯಿನ್ ಪತ್ತೆ ಹಾಗೂ ಜಪ್ತಿ ಪ್ರಕ್ರಿಯೆಯಲ್ಲಿ ಶ್ರೀಕಿ ಬಿಟ್ ಕಾಯಿನ್ ವ್ಯಾಲೆಟ್ ತೋರಿಸಿದ್ದ. ಆಗ ಅದರಲ್ಲಿ 31.8 ಬಿಟ್ ಕಾಯಿನ್ ಪತ್ತೆಯಾಗಿದ್ದವು. ಸೈಬರ್ ತಜ್ಞರ ಸಮ್ಮುಖದಲ್ಲೇ ವ್ಯಾಲೆಟ್​ನ ಪಾಸ್​ವರ್ಡ್ ಬದಲಾಯಿಸಿ, ಪಂಚನಾಮೆ ಮಾಡಿ, ಸಂಪೂರ್ಣ ಮಹಜರು ಪ್ರಕ್ರಿಯೆಯನ್ನು ವಿಡಿಯೋ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಬಿಟ್ ಕಾಯಿನ್​ಗಳನ್ನು ಪೊಲೀಸ್ ವ್ಯಾಲೆಟ್ ವರ್ಗಾಯಿಸಲು ಕೋರ್ಟ್ ಅನುಮತಿ ಪಡೆಯಲಾಯಿತು. ಆದರೆ, ಶ್ರೀಕಿ ತೋರಿಸಿದ ವ್ಯಾಲೆಟ್ ತೆರೆದಾಗ ಅದರಲ್ಲಿ 186.811 ಬಿಟ್ ಕಾಯಿನ್ ಪತ್ತೆಯಾಗಿದ್ದವು. ಸೈಬರ್ ತಜ್ಞರನ್ನು ಕೇಳಿದಾಗ ಶ್ರೀಕಿಯ ವೈಯಕ್ತಿಕ ವ್ಯಾಲೆಟ್ ಅಲ್ಲ. ಬಿಟ್-ಕಾಯಿನ್ ವಿನಿಮಯ ಕೇಂದ್ರಕ್ಕೆ ಸೇರಿದ್ದು ಎಂಬುದು ಗೊತ್ತಾಗಿತ್ತು. ಆದ್ದರಿಂದ ಖಾತೆಯಲ್ಲಿದ್ದ ಬಿಟ್ ಕಾಯಿನ್ ವರ್ಗಾವಣೆ ಆಗಲಿಲ್ಲ. ಈ ಮಾಹಿತಿ, ದಾಖಲೆಗಳನ್ನು ಕೋರ್ಟ್​ಗೆ ಸಲ್ಲಿಸಲಾಯಿತು. ಆರೋಪಪಟ್ಟಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.

ಕಸ್ಟಡಿಯಲ್ಲಿ ಶ್ರೀಕಿ ಡ್ರಗ್ಸ್ ಸೇವಿಸಿಲ್ಲ: ಜ.11ರಂದು ಕೋರ್ಟ್ ಮುಂದೆ ಆರೋಪಿ ಶ್ರೀಕಿ ಹಾಜರುಪಡಿಸಿದಾಗ, ಡ್ರಗ್ಸ್ ನೀಡಿಲ್ಲ ಎಂದು ಹೇಳಿಕೆ ನೀಡಿದ. ಆತನ ವಕೀಲರು, ಪೊಲೀಸ್ ಕಸ್ಟಡಿಯಲ್ಲಿ ಕಕ್ಷಿದಾರನಿಗೆ ಡ್ರಗ್ಸ್ ನೀಡಲಾಗಿದೆ ಎಂದರು. ಆರೋಪಿ, ತಾನು ಅಔಕ್ಕಅಘಣಔಅM’ ಸೇವಿಸಿರುವುದಾಗಿ ಹೇಳಿಕೆ ನೀಡಿದ. ಕೋರ್ಟ್, ವೈದ್ಯಕೀಯ ಪರೀಕ್ಷೆ ನಡೆಸುವಂತೆ ಸೂಚಿಸಿತು. ಕೋರ್ಟ್ ಸೂಚನೆ ಮೇರೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ಶ್ರೀಕಿ ರಕ್ತ, ಮೂತ್ರ ಪರೀಕ್ಷೆ ನಡೆಯಿತು. ವರದಿಯನ್ನು ವೈಜ್ಞಾನಿಕ ಪರೀಕ್ಷೆ ಎಫ್​ಎಸ್​ಎಲ್​ಗೆ ಸಲ್ಲಿಸಲಾಯಿತು. ಎಫ್​ಎಸ್​ಎಲ್ ತಜ್ಞರು ಡ್ರಗ್ಸ್ ಸೇವನೆ ಮಾಡಿಲ್ಲ ಎಂದು ವರದಿ ನೀಡಿದರು. ಶ್ರೀಕಿ ವಕೀಲರಿಗೆ ಹೈಕೋರ್ಟ್ 5 ಸಾವಿರ ರೂ. ದಂಡ ವಿಧಿಸಿತ್ತು.

ಹೇಳಿಕೆ ಅಷ್ಟೇ: ಕ್ರಿಪ್ಟೋ ಕರೆನ್ಸಿಯ ಹಲವು ವೆಬ್​ಸೈಟ್​ಹ್ಯಾಕಿಂಗ್ ಮಾಡಿರುವುದಾಗಿ ಶ್ರೀಕಿ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾನೆ. ಈ ಕುರಿತು ನಿಖರ ವಿವರ ನೀಡಿಲ್ಲ.

ಬಿಟ್ ಫಿನಿಕ್ಸ್ ವರ್ಗಾವಣೆಯಾಗಿಲ್ಲ: ಬಿಟ್ ಫಿನಿಕ್ಸ್ ನ 14,682 ಬಿಟ್ ಕಾಯಿನ್​ಗಳನ್ನು ವರ್ಗಾಯಿಸಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಆರೋಪವಾಗಿದೆ. ಆ ಬಿಟ್ ಕಾಯಿನ್ ಸಂಸ್ಥೆಯೂ ಬೆಂಗಳೂರಿನ ವ್ಯಾಪ್ತಿಯಲ್ಲಿ ಇಲ್ಲ. ವಿದೇಶದ ತನಿಖಾ ಸಂಸ್ಥೆ ಅಥವಾ ಕಂಪನಿಗಳು ಬೆಂಗಳೂರು ನಗರ ಪೊಲೀಸರನ್ನು ಸಂರ್ಪಸಿಲ್ಲ. ಬಿಟ್ ಫಿನಿಕ್ಸ್ ಸಹ ಕೂಡ ಮಾಹಿತಿ ಕೇಳಿಲ್ಲ. ವಿಚಾರಣೆ ವೇಳೆ ಶ್ರೀಕಿ, ವಿದೇಶ ಕಂಪನಿಗಳ ವೆಬ್​ಸೈಟ್ ಹ್ಯಾಕ್ ಮಾಡಿರುವುದಾಗಿ ನೀಡಿದ್ದ ಹೇಳಿಕೆ ಆಧರಿಸಿ ಮುಂದಿನ ತನಿಖೆ ಸಲುವಾಗಿ ಇಂಟರ್​ಫೋಲ್ ಮತ್ತು ಸಿಬಿಐಗೆ 2021ರ ಏ.28 ರಂದು ಪತ್ರ ಬರೆಯಲಾಯಿತು. ಇದೇ ಮಾಹಿತಿಯನ್ನು ಜಾರಿ ನಿರ್ದೇಶನಾಲಯಕ್ಕೆ ಮಾ.3ರಂದು ಪತ್ರ ಬರೆಯಲಾಯಿತು. ಇಡಿ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಆನ್​ಲೈನ್ ಗೇಮಿಂಗ್ ಆಪ್ ಹ್ಯಾಕ್ ಹಾಗೂ ಬಿಟ್ ಕಾಯಿನ್ ನೀಡುವುದಾಗಿ ವಂಚಿಸಿದ ಸಂಬಂಧ ಅಶೋಕನಗರ, ಸೈಬರ್ ಠಾಣೆಯಲ್ಲಿ ಮತ್ತೆ ಪ್ರತ್ಯೇಕ 2 ಎಫ್​ಐಆರ್​ಗಳು ದಾಖಲಾಗಿವೆ.


Spread the love

About Laxminews 24x7

Check Also

ಭೂಮಿ‌ ಇರೋವರೆಗೂ ಬಸವಣ್ಣನವರ ವಿಚಾರಧಾರೆಗಳನ್ನ ಕಾಪಾಡಬೇಕು: ಬಸವ ಸಂಸ್ಕೃತಿ ಅಭಿಯಾನದಲ್ಲಿ ಸತೀಶ ಜಾರಕಿಹೊಳಿ

Spread the loveಬೆಳಗಾವಿ: “ಭೂಮಿ ಇರುವವರೆಗೆ ಬಸವಣ್ಣನವರ ವಿಚಾರಗಳನ್ನು ಕಾಪಾಡುವ ಪ್ರಯತ್ನ ಮಾಡಬೇಕಿದೆ. ದೇಶದಲ್ಲಿ ಮೂಲ ವಿಚಾರ ಮತ್ತು ಇತಿಹಾಸವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ